ವಿಜಯಪುರ : ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಗುತ್ತಿಗೆದಾರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ತಿಳಿಸಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ನೂತನ ಕಟ್ಟಡ ಭೂಮಿ ಪೂಜೆ ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ವೇಳೆ ಮುದ್ದೇಬಿಹಾಳ ಮತಕ್ಷೇತ್ರದ ಕೊಣ್ಣೂರ ಗ್ರಾಮದ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗಾಗಿ ಸುಮಾರು ೨ಕೋಟಿ ರೂಪಾಯಿ ಅನುದಾನ ನೀಡಲು ಸಚಿವರಿಗೆ ಮನವಿ ಪತ್ರ ನೀಡಲಾಗಿದ್ದು ಅದಕ್ಕೆ ಸಕಾರಾತ್ಮಕ ಸ್ಪಂದನೆಯನ್ನು ಸಚಿವರು ನೀಡಿದ್ದು ಎರಡು ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶರಣಯ್ಯ ಹಿರೇಮಠ, ರಹಿಂಸಾಬ ಅವಟಿ, ಯಲಪ್ಪ ಮಾದರ, ಅಸ್ಕಿ ಫೌಂಡೇಶನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ,ಶಾಂತಗೌಡ ಹಡಲಗೇರಿ,ರಾಮಣ್ಣ ಮಣೂರ, ದಾವಲಸಾಬ ಮಡಿಕೇಶ್ವರ, ಇಮ್ರಾನ್ ಟಕ್ಕಳಕಿ,ಸಂಗನಗೌಡ ಬಿರಾದಾರ, ಇನ್ನೂ ಅನೇಕ ಯುವ ಮುಖಂಡರು ಇದ್ದರು.







