ಬೆಂಗಳೂರು: ತಾಯಿಯ ಎದುರೇ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಗಾರ್ವೇಬಾವಿ ಪಾಳ್ಯದ ಹೊಂಗಸಂದ್ರದ ಲಕ್ಷ್ಮೀ ಪುರದಲ್ಲಿ ನಡೆದಿದೆ.
ಮೃತನು 18 ವರ್ಷದ ಪ್ರತಾಪ್ ಮೃತದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ.
ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದನು. ರಜನಿ ಕೆಲಸಕ್ಕೆ ಹೋಗದ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗುರುವಾರ ಮಧ್ಯಾಹ್ನ ಜಗಳವಾಗಿದೆ. ಜಗಳದ ನಡುವೆ ಮೃತ ಪ್ರತಾಪ್ ರಜನಿಗೆ ದಂಡಪಿಂಡ ಎಂದು ಬೈದಿದ್ದಾನೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಬಳಿಕ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ತಾಯಿ ಬಿಡಿಸಲು ಬಂದರೂ ಅಣ್ಣ-ತಮ್ಮಂದಿರ ಜಗಳ ನಿಂತಿಲ್ಲ.
ಇದನ್ನೂ ಓದಿ: ಸಿರಿಗೆರೆ ಶ್ರೀ ವಿರುದ್ಧ ಮಾನನಷ್ಟ ದಾವೆ: ಸ್ಫೋಟಕ ಬಾಂಬ್ ಸಿಡಿಸಿದ ಮಾಜಿ ಸಚಿವ
ಬಳಿಕ ರಜನಿ ಅಡುಗೆ ಮನೆಗೆ ತೆರಳಿ ಚಾಕು ತಂದು, ತಮ್ಮ ಪ್ರತಾಪ್‌ನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರತಾಪ್ ಕುಸಿದು ಬಿದ್ದಿದ್ದಾನೆ. ಕೂಡಲೆ ಪ್ರತಾಪ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಪ್ರತಾಪ್ ಮೃತಪಟ್ಟಿದ್ದಾನೆ.
ಬೇಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿ ರಜನಿಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.