ವಿಜಯಪುರ: ತಾಲೂಕಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಗ್ರಾಮ ಪಂಚಾಯಿತಿ ಲೆಕ್ಕ ಪರಿಶೋಧನೆ ವೇಳೆ ಗಲಾಟೆ ಉಂಟಾಗಿ ಗ್ರಾಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ (Crime news) ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಹೌದು, ಕೆರೂಟಗಿ ಗ್ರಾಮದಲ್ಲಿ ಸೆಪ್ಟೆಂಬರ್ 14ರಂದು ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶರಣಮ್ಮ ಸಂದಿಮನಿ ಎಂಬುವವರೇ ದಾಳಿ ಮಾಡಿದ ಉಪಾಧ್ಯಕ್ಷೆ. ಗ್ರಾಪಂ ಕಾಯಕಮಿತ್ರ ದ್ರೌಪದಿ ಹಿರೇಮಠ ಥಳಿತಕ್ಕೆ ಒಳಗಾದವರು ಎನ್ನಲಾಗಿದೆ.
ಗ್ರಾಪಂ ಲೆಕ್ಕ ಪರಿಶೋಧಕ್ಕೆ ಉಪಾಧ್ಯಕ್ಷೆ ಶರಣಮ್ಮ ಪತಿ ರಾಜಶೇಖರ್ ಸಂದಿಮನಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಜಿಲ್ಲಾ ಪಂಚಾಯಿತಿಯಿಂದ ಆಗಮಿಸಿದ್ದ ಲೆಕ್ಕ ಪರಿಶೋಧಕರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮತ್ತು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಗಲಾಟೆ ಕಾರಣದಿಂದ ಗ್ರಾಮ ಕಾಯಕ ಮಿತ್ರ ದ್ರೌಪದಿ ಹಿರೇಮಠ ಮನೆಗೆ ಬಂದಿದ್ದರು. ಆದರೂ, ದ್ರೌಪದಿಯ ಮನೆಗೆ ತೆರಳಿ ಉಪಾಧ್ಯಕ್ಷೆ ಶರಣಮ್ಮ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಹಾಕಲಾಗಿದೆ. ಇದಕ್ಕೆ ಪತ್ನಿಗೆ ಪತಿ ಕುಮ್ಮಕ್ಕು ನೀಡಿದ್ದಾನೆ ಎನ್ನಲಾಗಿದೆ.
ಬಳಿಕ ಹಲ್ಲೆಗೆ ಒಳಗಾದ ಮಹಿಳೆ ಕಲಕೇರಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೂಡ ಮಾಡಲಾಗಿದೆ. ಶರಣಮ್ಮ ಹಾಗೂ ರಾಜಶೇಖರ್ ಅವರನ್ನು ಕರೆಯಿಸಿ ಕೇವಲ ಎಚ್ಚರಿಕೆ ಕೊಟ್ಟು ಪೊಲೀಸರು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೆ, ಮತ್ತೆ ಸೆ.17ರಂದು ದ್ರೌಪದಿ ಹಿರೇಮಠ ಮೇಲೆ ಉಪಾಧ್ಯಕ್ಷೆಯ ಪತಿ ರಾಜಶೇಖರ ಎರಡನೇ ಬಾರಿ ಹಲ್ಲೆ ಮಾಡಿದ್ದಾನೆ. ಇದರಿಂದ ಎಚ್ಚೆತ್ತ ಗ್ರಾಪಂ ಪಿಡಿಒ ಎ.ಟಿ.ಅಂಗಡಿ ಹಾಗೂ ಕಾರ್ಯದರ್ಶಿ ಎ.ಎಸ್. ಮುಜಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದರ ಪ್ರಕಾರ ರಾಜಶೇಖರ ಸಂದಿಮನಿ ವಿರುದ್ಧ ಸರ್ಕಾರಿ ಸೇವೆಗೆ ಅಡ್ಡಿ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ದ್ರೌಪತಿ ಹಿರೇಮಠ ನೀಡಿದ ದೂರು ಸ್ವೀಕರಿಸಬೇಕು ಮತ್ತು ಹಲ್ಲೆ ಮಾಡಿರುವ ಗ್ರಾಪಂ ಉಪಾಧ್ಯಕ್ಷೆಯ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯವನ್ನು ಸಾರ್ವಜನಿಕರು ಮಾಡಿದ್ದಾರೆ.
ಗ್ರಾಪಂ ಸಿಬ್ಬಂದಿಗೆ ಉಪಾಧ್ಯಕ್ಷೆಯಿಂದ ಚಪ್ಪಲಿ ಸೇವೆ pic.twitter.com/mafNsM67GD
— dcgkannada (@dcgkannada) September 20, 2024
ಇದನ್ನೂ ಓದಿ: Ration card : ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ? ಪರಿಶೀಲಿಸಿ..