ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ಪಟ್ಟಣದ ಓಸ್ವಾಲ್ ಹಾಲ್ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿ ಸ್ಥಾಪಿಸಿ, ಇಲ್ಲಿನ ಮಕ್ಕಳಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ತಾಲೂಕಿನ ಹೆಸರನ್ನು ರಾಜ್ಯಾದ್ಯಂತ ಪಸರಿಸುವಂತೆ ಮಾಡುತ್ತಿರುವ ಸಂಸ್ಥಾಪಕ ಶಿವಕುಮಾರ್ ಶಾರದಳ್ಳಿ ಅವರ ಪ್ರಯತ್ನ ಶ್ಲಾಘನೀಯವಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರೆ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕುಂಟೋಜಿ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕ ಪರಿಶ್ರಮ ಇದ್ದರೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸಲು ಸಾಧ್ಯ. ಕರಾಟೆ ಹಾಗೂ ರೋಲರ್ ಸ್ಕೆಟಿಂಗ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಪರಿಶ್ರಮಪಟ್ಟಿರುವುದರಿಂದಲೇ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಗಳಂತಹ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕರಾಟೆ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಮುದ್ದೇಬಿಹಾಳದ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತಾಲೂಕಿನ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಲಿ ಎಂದು ಆಶಿಸಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ ಕೊಪ್ಪ,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ,ಪುರಸಭೆ ಮಾಜಿ ಸದಸ್ಯೆ ಸಹನಾ ಬಡಿಗೇರ ಮಾತನಾಡಿದರು.ಬಿಎಎಸ್ ಶಾಲೆ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ,ಅಕ್ಷತಾ ಚಲವಾದಿ ಸೇರಿದಂತೆ ಸಮಾರಂಭದಲ್ಲಿ ಕರಾಟೆ ಹಾಗೂ ರೋಲರ್ ಸ್ಕೆಟಿಂಗ್ನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು, ಪಾಲಕರು, ಕ್ರೀಡಾಭಿಮಾನಿಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ :
ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮೊಹಮ್ಮದ್ ನದೀಮ್, ಪ್ರಧಾನ ಕಾರ್ಯದರ್ಶಿಯಾಗಿ ಕಟ್ಟೆ ಸ್ವಾಮಿ, ಗೌರವಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಆಚಾರ್ಯ, ಉಪಾಧ್ಯಕ್ಷರಾಗಿ ಸತೀಶ, ಮೌನೇಶ ಹಾಗೂ ವಿಶಾಲ, ಖಜಾಂಚಿಯಾಗಿ ಶಿವಕುಮಾರ್ ಶಾರದಳ್ಳಿ, ಸಹ ಕಾರ್ಯದರ್ಶಿಯಾಗಿ ಪ್ರಕಾಶ ಉಜನಿಕೊಪ್ಪ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸುಭಾಷ್ ವಿಜಯನಗರ ಅವರು ಅಧಿಕಾರ ವಹಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು.







