ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ ಸಿ.ಎಸ್.ನಾಡಗೌಡರು ಸರ್ಕಾರದ ಮೇಲೆ ಒತ್ತಡ ಹೇರಿ ತೀವ್ರ ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಸ್ಥಾನಪಡೆದುಕೊಳ್ಳಲು ಶ್ರಮಿಸಲಿದ್ದಾರೆ ಎಂದು ತಂಗಡಗಿ ವಿವಿದೋದ್ಧೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಶ್ರೀಶೈಲ್ ಮರೋಳ ಹೇಳಿದರು.
ತಾಲ್ಲೂಕಿನ ತಂಗಡಗಿ ಗ್ರಾಮದ ಶ್ರೀ ಚರಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಸಂಘದ 78 ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಂಘವು 1948 ರಲ್ಲಿ ಪ್ರಾರಂಭವಾಗಿ ಇಂದು 1095 ಸದಸ್ಯರನ್ನು ಹೊಂದಿ 80.58 ಲಕ್ಷ ಶೇರು ಸಂಗ್ರಹಿಸಿ ರೂಪಾಯಿ 38.93 ನಿಧಿಗಳನ್ನು ಸಂಘದ ರೈತ ಸದಸ್ಯರ ಕೃಷಿ ಚಟುವಟಿಕೆ ಗೆ 653.93 ಲಕ್ಷ ರೂ ಗಳಷ್ಟು ಸಾಲ ಒದಗಿಸಿ ಈ ವರ್ಷ ಸಂಘ 8.62 ಲಕ್ಷ ಲಾಭ ಮಾಡಿದೆ ಎಂದು ಹೇಳಿದರು.
ಸರ್ಕಾರ ಬರಗಾಲ ಘೋಷಣೆಗೆ ಸಮೀಕ್ಷೆ ಮಾಡಲು ಆದೇಶ ಮಾಡಿದೆ.ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾದಲ್ಲಿ ರೈತರಿಗೆ ಬರಗಾಲದ ಸೌಲಭ್ಯ ಸಿಗುತ್ತದೆ.ಹಲವು ರಿಯಾಯಿತಿಗಳು ರೈತರಿಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ಸಂಘದ ಹಿರಿಯ ನಿರ್ದೇಶಕ ಬಸವರಾಜ ಇಸ್ಲಾಂಪೂರ ಮಾತನಾಡಿ, ಸಂಘದಲ್ಲಿ ಸಾಲಪಡೆಯುವ ಸಾಲಗಾರನಷ್ಟೇ ಜಾಮೀನುದಾರರು ಮುಖ್ಯವಾಗುತ್ತಾರೆ. ಸದ್ಯ ಸಹಕಾರಿ ರಂಗದಲ್ಲಿ ಅನೇಕ ಬದಲಾವಣೆಗಳಾಗಲಿದ್ದು ಅದಕ್ಕೆ ಬದ್ದರಾಗಿ ನಾವು ಸಾಗಬೇಕಿದೆ.ಸಂಘದ ಏಳ್ಗೆಗೆ ಸದಸ್ಯರು ಠೇವಣಿ ಮಾಡಬೇಕು ಎಂದರು.
ಕ್ಷೇತ್ರ ಸಿಬ್ಬಂದಿ ಬಿ.ಎಸ್.ಬಡದಾನಿ, ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರ ಪ್ರವೀಣ ಗೊಳಸಂಗಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ.ಮಕ್ಕಳ ಕೈಗೆ ಮೊಬೈಲ್ ಕೊಡುವ ವೇಳೆ ಎಚ್ಚರದಿಂದ ಅದನ್ನು ಬಳಸು ತಿಳಿಸಬೇಕಿದೆ.ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕುಗಳನ್ನು ಒತ್ತುವುದು, ಓಟಿಪಿ ನೀಡುವುದು ಮಾಡಬಾರದು.ಅನವಶ್ಯಕ ಆ್ಯಪ್‌ಗಳಿಂದಲೂ ವಂಚನೆ ಮಾಡುತ್ತಾರೆ ಎಂದು ಜಾಗೃತಿ ಮೂಡಿಸಿದರು.
ಸಭೆಯಲ್ಲಿ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಲಿಕಸಾಬ ನಧಾಪ್, ನಿರ್ದೇಶಕರುಗಳಾದ ಸಂಗಯ್ಯಾ ಸಾರಂಗಮಠ, ಶಿವಯೋಗಿ ಹೂಳಿ , ಜಿ.ಎಸ್ ಕರಭಂಟನಾಳ, ಎಸ್.ವಿ.ತುಪ್ಪದ, ಜಯಶ್ರೀ ಮೇಟಿ, ಸುನಂದಾ ನಿಡಗುಂದಿ, ನಿಜಗುಣಪ್ಪ ಜೂಲಗುಡ್ಡ, ಮಹಾಂತೇಶ ಚಲವಾದಿ, ಧರಿಯಪ್ಪ ದೇಸಣಗಿ, ಸಿಬ್ಬಂದಿ ಎಸ್.ಎಸ್.ಲಿಂಗದಳ್ಳಿ, ವಿ.ಎಸ್.ಬಿದರಕುಂದಿ, ಎಸ್. ಎಸ್. ಕರಭಂಟನಾಳ ಭಾಗವಹಿಸಿದ್ದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂಗಪ್ಪ ನಿಡಗುಂದಿ ವರದಿ ವಾಚಿಸಿದರು.ರಮೇಶ ಲಿಂಗದಳ್ಳಿ ನಿರೂಪಿಸಿದರು.ಸಿದ್ದಣ್ಣ ಹೊಳಿ ವಂದಿಸಿದರು.







