ಮುದ್ದೇಬಿಹಾಳ : ಪೌರಕಾರ್ಮಿಕರು ನಗರಗಳ ಸ್ವಚ್ಛತೆಯ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದು ಅವರ ಸೇವೆ ಅನನ್ಯವಾದದ್ದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಪುರಸಭೆಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಪ್ರತಿ ವರ್ಷ ಪೌರಕಾರ್ಮಿಕರಿಗೆ ವಿಶೇಷ ಭತ್ಯೆಯಾಗಿ 7500 ರೂ.ಅವರ ಖಾತೆಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ರಾಮಣ್ಣ ಚಲವಾದಿ ಮಾತನಾಡಿ, ಪುರಸಭೆಯಿಂದ ನಮ್ಮ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಪ್ರೋತ್ಸಾಹಿಸಿದ್ದಾರೆ.ನಮಗೆ ಎಲ್ಲ ಸೌಲಭ್ಯಗಳನ್ನು ಪುರಸಭೆಯಿಂದ ಒದಗಿಸಲಾಗಿದ್ದು ನಮ್ಮ ಅಧಿಕಾರಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ,ಪೌರಕಾರ್ಮಿಕರ ಜವಾಬ್ದಾರಿ ಒಬ್ಬ ಪ್ರಧಾನಿ,ಮುಖ್ಯಮಂತ್ರಿ,ಶಾಸಕರಿಗಿoತಲೂ ಮಿಗಿಲಾದದ್ದಾಗಿದೆ.ಇವರೆಲ್ಲ ಬಾರದಿದ್ದರೂ ನಡೆಯುತ್ತದೆ.ಆದರೆ ಪೌರಕಾರ್ಮಿಕರು ಬರದಿದ್ದರೆ ಊರು ಆರೋಗ್ಯವಾಗಿರಲು ಸಾಧ್ಯವಿಲ್ಲ ಎಂದರು.
ತಾ.ಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ್ ಮಾತನಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಹಾಂತೇಶ ಕಟ್ಟೀಮನಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ,ವೀರನಾರಿಯರ ಸಂಘದ ಸುವರ್ಣಾ ಬಿರಾದಾರ,ಹಣಮಂತ ಚಲವಾದಿ ಸೇರಿದಂತೆ ಹಲವರು ಇದ್ದರು.
ಬೆಳಗ್ಗೆ ಪುರಸಭೆ ಎದುರಿಗೆ ಪೌರಕಾರ್ಮಿಕರ ದಿನಾಚರಣೆ ನಿಮಿತ್ಯ ರ್ಯಾಲಿಗೆ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ ಚಾಲನೆ ನೀಡಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.ಶಿಕ್ಷಕ ಟಿ.ಡಿ.ಲಮಾಣಿ ಸ್ವಾಗತಿಸಿ ನಿರೂಪಿಸಿದರು.







