ಮುದ್ದೇಬಿಹಾಳ : ತಾಲೂಕಿನ ಯರಗಲ್ನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯು 2026–27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ್ದು ಅದರಂತೆ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ರೂ.3,800 ಮೊದಲ ಕಂತಿನಲ್ಲಿಯೇ ಪಾವತಿಸುವುದಾಗಿ ತಿಳಿಸಿದೆ.ಇದರಿಂದ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.
ಕಾರ್ಖಾನೆಯ ಶೇ.11.62 ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ ರೂ.4,138 ಎಫ್ಆರ್ಪಿ ದರ ನಿಗದಿಯಾಗಿದ್ದು, ರೈತರು ಮತ್ತು ಕಾರ್ಖಾನೆ ನಡುವಿನ ಒಡಂಬಡಿಕೆಯOತೆ ಮೊದಲ ಕಂತಿನಲ್ಲಿ ರೂ.3,800 ಹಾಗೂ ಎರಡನೇ ಕಂತಿನಲ್ಲಿ ಸಕ್ಕರೆ ದರ ಆಧರಿಸಿ ರೂ.200 ಪಾವತಿಸುವುದಾಗಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ದರಪಟ್ಟಿಯಲ್ಲಿ ಬಾಲಾಜಿ ಶುಗರ್ಸ್ ಘೋಷಿಸಿರುವ ರೂ.3,800 ದರ ಗಮನ ಸೆಳೆದಿದ್ದು ಕಬ್ಬು ಬೆಳೆಗಾರರಿಗೆ ಉತ್ತಮ ದರ ದೊರೆಯುವ ನಿರೀಕ್ಷೆ ಕಬ್ಬು ಬೆಳೆಗಾರರಲ್ಲಿ ಮೂಡಿದೆ.ಜಿಲ್ಲೆಯಲ್ಲಿಯೇ ಅತೀ ಹೆಚ್ಚು ದರ ಕೊಡುವ ಘೋಷಣೆ ಪ್ರಕಟಿಸಿರುವುದು ಬಾಲಾಜಿ ಸಕ್ಕರೆ ಕಾರ್ಖಾನೆ ಎಂಬುದು ವಿಶೇಷವಾಗಿದೆ.
ಮೊದಲ ಕಂತಿನಲ್ಲಿಯೇ 3800 ರೂ.ದರ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೊದಲ ಕಂತಿನಲ್ಲಿಯೇ 3800 ರೂ.ಪಾವತಿಸುವಂತೆ ಒತ್ತಡ ಹೇರಿದ್ದರು.ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸಿರುವುದಕ್ಕೆ ಕಬ್ಬು ಬೆಳೆಗಾರರು, ಹೋರಾಟಗಾರರು ಸ್ವಾಗತಿಸಿದ್ದಾರೆ.







