ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಹೇಳಿದರು.
ತಾಲ್ಲೂಕಿನ ಹುಲ್ಲೂರ ಗ್ರಾಮದ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ತಮ್ಮ ಮಾತುಗಳಿಗಿಂತ ಶಿಕ್ಷಕರ ಮಾತುಗಳಿಗೆ ಹೆಚ್ಚಿನ ಗೌರವ ಹಾಗೂ ಮಹತ್ವ ನೀಡುತ್ತಾರೆ. ಹೀಗಾಗಿ ಶಿಕ್ಷಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಹೆಸ್ಕಾಂ ಇಲಾಖೆಯ ಎಇಇ ರಾಜಶೇಖರ ಹಂಡಿ ಮಾತನಾಡಿ,ಯಾರೇ ತಪ್ಪು ಮಾಡಿದರೂ ದೇಶಕ್ಕೆ ಅಷ್ಟೊಂದು ಹಾನಿಯಾಗುವುದಿಲ್ಲ. ಆದರೆ ಶಿಕ್ಷಕರು ತಪ್ಪು ಮಾಡಿದರೆ ಇಡೀ ಜಗತ್ತೇ ತಪ್ಪಾಗಿ ರೂಪುಗೊಳ್ಳುತ್ತದೆ. ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ ಮಾತನಾಡಿ, ಚಿಕ್ಕ ಗ್ರಾಮವಾದ ಹುಲ್ಲೂರಿನ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಈ ಸಂಸ್ಥೆ ಹಾಗೂ ಶಾಲೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಅಧ್ಯಕ್ಷತೆಯನ್ನು ಎನ್‌ಟಿಪಿಸಿ ಮ್ಯಾನೇಜರ್ ಚಂದ್ರಕಾAತ ಕಟ್ಟಿಮನಿ ವಹಿಸಿದ್ದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್, ಸುರೇಶ ಹಿರೇಮಠ, ಶಂಕರಗೌಡ ಗೌಡರ, ಸುರೇಶ ಹಳೆಮನಿ, ದಿವಾಕರ ಜೋಶಿ, ವಿನೋದ ಓಲೇಕಾರ, ಮಹಾದೇವಪ್ಪ ಹಳ್ಳದ, ಒಂಕಾರ, ಬಿ.ಬಿ. ಸಾಲಿಮನಿ, ಅಶೋಕ ಗುಂಡಿನಮನಿ, ಬಸನಗೌಡ ಬಿರಾದಾರ, ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಬಿ. ಕಪನೂರ ಹಾಗೂ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕೊಪ್ಪ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಿಂಚಿದ ಛದ್ಮವೇಷಧಾರಿಗಳು:
ಪ್ರತಿಭಾ ಕಾರಂಜಿಯ ವಿಶೇಷ ಆಕರ್ಷಣೆಯಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಣ್ಣದ ಮನೆ ಕಲಾವಿದರನ್ನು ಕರೆಸಿ ಎಸ್‌ಎನ್‌ಡಿ ಶಾಲೆಯ ವತಿಯಿಂದ ಅದ್ಭುತವಾದ ಛದ್ಮವೇಷಗಳನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲೂ ಕುಮಾರಿ ದೀಪ್ತಿ ಬಡಿಗೇರ ದೇವತೆಯ ವೇಷ ಧರಿಸಿ ಎಲ್ಲರ ಗಮನ ಸೆಳೆಯುವ ಮೂಲಕ ಮೆಚ್ಚುಗೆಗೆ ಪಾತ್ರಳಾದಳು.
34 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ:
ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಎಸ್‌ಎನ್‌ಡಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಿರಿಯ ವಿಭಾಗದಲ್ಲಿ (1ರಿಂದ 4ನೇ ತರಗತಿ) 15 ಸ್ಪರ್ಧೆಗಳಲ್ಲಿ 15 ಪ್ರಶಸ್ತಿಗಳನ್ನು ಪಡೆದು 10 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಹಿರಿಯ ವಿಭಾಗದಲ್ಲಿ (5ರಿಂದ 7ನೇ ತರಗತಿ) 16 ಸ್ಪರ್ಧೆಗಳಲ್ಲಿ 12 ಪ್ರಶಸ್ತಿಗಳನ್ನು ಪಡೆದು 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರೌಢ ವಿಭಾಗದಲ್ಲಿ (8ರಿಂದ 10ನೇ ತರಗತಿ) 19 ಸ್ಪರ್ಧೆಗಳಲ್ಲಿ 19 ಪ್ರಶಸ್ತಿಗಳನ್ನು ಪಡೆದು 14 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಪು ವಿಭಾಗದ 3 ಸ್ಪರ್ಧೆಗಳಲ್ಲಿ 3 ಪ್ರಶಸ್ತಿಗಳನ್ನು ಪಡೆದು 2 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಒಟ್ಟು ತಾಲ್ಲೂಕು ಮಟ್ಟಕ್ಕೆ 34 ಆಯ್ಕೆಯಾಗಿರುವುದು ಶಾಲೆಯ ಸಾಧನೆಗೆ ಸಾಕ್ಷಿಯಾಗಿದೆ.







