ಮುದ್ದೇಬಿಹಾಳ : ಹಿಂದೆoದೂ ಕಂಡರಿಯದoತ ಭೀಕರ ಬರಗಾಲ ಈ ವರ್ಷ ಬಂದಿದ್ದು ರೈತರ ಖಾತೆಗೆ ಎಲ್ಲ ಮಂತ್ರಿಗಳು,ಶಾಸಕರ ವೇತನ ಭತ್ಯೆ ಕಡಿತಗೊಳಿಸಬೇಕು.ಅಗತ್ಯ ಬಿದ್ದರೆ ಸರ್ಕಾರಿ ನೌಕರರ ಸಂಬಳವನ್ನು ಅರ್ಧಕ್ಕೆ ಕಡಿತಗೊಳಿಸಿ,ಗ್ಯಾರಂಟಿ ಸ್ಕೀಂಗಳನ್ನು ನಿಲ್ಲಿಸಿ ರೈತರ ಖಾತೆಗೆ ಹಣ ಜಮಾ ಮಾಡಲು ಮುಖ್ಯಮಂತ್ರಿಗಳು ಆದೇಶಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಆಗ್ರಹಿಸಿದರು.
ತಾಲ್ಲೂಕಿನ ಬಿದರಕುಂದಿ,ಢವಳಗಿ,ಬಸರಕೋಡ,ರೂಡಗಿ ಭಾಗದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿ ರೈತರೊಂದಿಗೆ ಸಮಾಲೋಚಿಸಿದ ಬಳಿಕ ರೂಢಗಿ ಗ್ರಾಮದ ವ್ಯಾಪ್ತಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಮರ್ಪಕ ನೀರಿನಂಶ ಇಲ್ಲದೇ ನಾಶವಾಗಿವೆ.ಕ್ಷೇತ್ರದ ಶಾಸಕರು ಇನ್ಸೂö್ಯರೆನ್ಸ್ ಕಂಪನಿಯವರನ್ನು ಕರೆದು ರೈತರಿಗೆ ಪರಿಹಾರ ಕೊಡಿಸಬೇಕಿತ್ತು.ಆದರೆ ಕೇಂದ್ರ ಸರ್ಕಾರದತ್ತ ಬೆರಳು ಮಾಡುವುದನ್ನು ಬಿಟ್ಟು ಮೊದಲು ತಮ್ಮ ಪಾಲಿನ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿಸುವುದನ್ನು ಮಾಡಬೇಕು ಎಂದು ನಡಹಳ್ಳಿ ಹೇಳಿದರು.
ತಕ್ಷಣ ಸರ್ಕಾರ ರೈತರ ಖಾತೆಗಳಿಗೆ 25 ಸಾವಿರ ರೂ.ಜಮಾ ಮಾಡಿ ಅಧಿವೇಶನ ನಡೆಸಬೇಕು.ಸರ್ಕಾರದ ನಿರ್ಲಕ್ಷ ಧೋರಣೆ ಮುಂದುವರೆದರೆ ವಿಜಯಪುರ ಜಿಲ್ಲೆಯಲ್ಲಿ ಐದು ಲಕ್ಷ ಜನರನ್ನು ಸೇರಿಸಿಕೊಂಡು ಬಾರಕೋಲುಗಳೊಂದಿಗೆ ಚಳವಳಿ ಮಾಡುತ್ತೇವೆ ಎಂದು ಹೇಳಿದರು.
ರೈತರ ಖಾತೆಗಳಿಗೆ ಹಣ ಹಾಕಲು ವಿರೋಧ ಪಕ್ಷದ ನಾಯಕರಲ್ಲೂ ನಾನು ಮನವಿ ಮಾಡುತ್ತಿದ್ದೇನೆ.ನಮ್ಮ ರೈತ ಒಂದು ಹೊತ್ತಿನ ಊಟ ಮಾಡಬೇಕಾಗಿದೆ.ಕೆರೆಗಳಿಗೆ ನೀರು ತುಂಬಿಸಲು ರೈತರು ಒತ್ತಾಯಿಸುತ್ತಿದ್ದರೂ ಆಡಳಿತ ಪಕ್ಷದ ಶಾಸಕರು ರೈತರ ಬಳಿ ಎರಡು ದಿನ ಕಾಲಾವಕಾಶ ಕೇಳಿದ್ದಾರೆ.ನಾವು ನಾಲ್ಕೈದು ದಿನ ಕಾಯುತ್ತೇವೆ.ನೀರು ಬಿಡದಿದ್ದರೆ ಬಡಿಗೆ ತಗೆದುಕೊಂಡು ಬಡಿದಾಡಿಯಾದರೂ ನೀರು ಬಿಡಿಸಿಕೊಳ್ಳುತ್ತೇವೆ ಎಂದು ನಡಹಳ್ಳಿ ಎಚ್ಚರಿಸಿದರು.
ತಾಲ್ಲೂಕಿನಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿ ಇದೆ.ಶಾಸಕರು ಬೆಳೆಯನ್ನು ವೀಕ್ಷಣೆಯನ್ನು ಕಾಟಾಚಾರಕ್ಕೆ ಮಾಡಿದ್ದಾರೆ.ಸಜ್ಜೆ ಬೆಳೆಯನ್ನು ನೋಡಿ ಅದು ಮತ್ತೆ ಚಿಗುರುತ್ತದೆ ಎಂದು ಹೇಳುತ್ತಿರುವುದನ್ನು ನೋಡಿದಾಗ ಶಾಸಕರ ಮಾನಸಿಕ ಸ್ಥಿಮಿತತೆ ಹೇಗಿದೆ ಎಂದು ಅರ್ಥವಾಗುತ್ತದೆ.ಇವರಿಗೆ ರೈತರಿಗೆ ಪರಿಹಾರ ದೊರಕಿಸಿಕೊಡುವ ಮನಸ್ಸು ಇಲ್ಲ.ಈ ಸರಕಾರ ಕಾಲುವೆಗಳಿಗೆ ನೀರು ಬಿಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ರೈತರು ಮಾತನಾಡಿ,ತೊಗರಿ, ಸೂರ್ಯಕಾಂತಿ,ಹತ್ತಿ,ಸಜ್ಜೆ ಬಿತ್ತಿದ್ದೇವೆ.ಆದರೆ ಬೆಳೆ ನಿರೀಕ್ಷೆ ಇಟ್ಟುಕೊಂಡಷ್ಟು ಬೆಳೆದಿಲ್ಲ.ಮಳೆ ಆಗದ ಕಾರಣ ಬೆಳೆ ಹಾಳಾಗುತ್ತಿದೆ.ಎಕರೆಗೆ 25-30 ಸಾವಿರದವರೆಗೆ ಖರ್ಚು ಮಾಡಿದ್ದು ಈಗ ತೊಂದರೆಯಲ್ಲಿದ್ದೇವೆ.ಈವರೆಗೆ ಯಾವ ಅಧಿಕಾರಿಗಳು ಹೊಲಗಳಿಗೆ ಭೇಟಿ ಕೊಟ್ಟಿಲ್ಲ ಎಂದು ಹೇಳಿಕೊಂಡರು.
ರಾಜ್ಯ ಸರ್ಕಾರ ಕತ್ತೆ ಕಾಯುತ್ತಿದೆಯೇ ? ಪ್ರತಿ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ.ತಕ್ಷಣ 25 ಸಾವಿರ ರೂ.ಹಾಕಿ.ಮೊದಲು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಸರಕಾರದ ಧೋರಣೆಯನ್ನು ಖಂಡಿಸುವುದಾಗಿ ಮಾಜಿ ಶಾಸಕರು ಹೇಳಿದರು.ತೊಗರಿ,ಹತ್ತಿ,ಸೂರ್ಯಕಾಂತಿ,ಸಜ್ಜೆ ಬೆಳೆಯನ್ನು ಮಾಜಿ ಶಾಸಕರು ವೀಕ್ಷಣೆ ಮಾಡಿದರು.
ಜಿಪಂ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ,ಶ್ರೀಶೈಲ ದೊಡಮನಿ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಸಂಗಮೇಶ ಹತ್ತಿ,ಸಂತೋಷ ಬಾದರಬಂಡಿ.ರೈತರಾದ ಚನ್ನಬಸಪ್ಪಗೌಡ ಪಾಟೀಲ್, ಶಂಕ್ರಪ್ಪ ಸಜ್ಜನ್,ಬಾಪುಗೌಡ ಗರಸಂಗಿ,ಸೋಮಶೇಖರ ಸಜ್ಜನ, ಬಸಮ್ಮ ಮಂಕಣಿ ಸೇರಿದಂತೆ ಬಿದರಕುಂದಿ,ಬಸರಕೋಡ,ರೂಢಗಿ,ಢವಳಗಿ ಗ್ರಾಮದ ರೈತರು ಇದ್ದರು.
ನಾಡಗೌಡ-ಎಂ.ಬಿ.ಪಾಟೀಲರ ಜಗಳದಲ್ಲಿ ರೈತರು ಸಾಯುತ್ತಿದ್ದಾರೆ :
ಉಸ್ತುವಾರಿ ಸಚಿವರನ್ನು ರೈತರು ಅವರಿದ್ದಲ್ಲಿಯೇ ಹೋಗಿ ಕಾಲುವೆಗಳಿಗೆ ನೀರು ಬಿಡಿಸಿ ಎಂದರೆ ನಿಮ್ಮ ಎಂ.ಎಲ್.ಎಗೆ ಫೋನ್ ಮಾಡಲಿ ನಂತರ ಮಾತನಾಡುತ್ತೇನೆ ಎಂದು ಹೇಳುತ್ತಾರೆ.ನಾಡಗೌಡರು ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರ ಜಗಳದಲ್ಲಿ ರೈತರು ಸಾಯುತ್ತಿದ್ದಾರೆ.ನೀವು ಉಸ್ತುವಾರಿ ಮಂತ್ರಿಗಳಾಗಿದ್ದು ಯಾವ ಸಾರ್ಥಕತೆಗಾಗಿ ಎಂದು ಸಚಿವ ಎಂಬಿಪಿ ಅವರನ್ನು ಪ್ರಶ್ನಿಸಿದ ನಡಹಳ್ಳಿ ಅವರು,79 ಲಕ್ಷ ರೈತರು ಸಂಕಷ್ಟದಲ್ಲಿದ್ದಾರೆ.ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಒತ್ತಾಯಿಸಿದರು.







