ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಇಂಗ್ಲಿಷ್ ನಮ್ಮ ಮನೆಯ ಹಾಲ್ನವರೆಗೆ ಬರಲಿ, ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿ ಮಾತ್ರ ಕನ್ನಡದ ಪರಿಮಳವೇ ಇರಬೇಕು ಎಂದು ಬದುಕಿನ ಪ್ರತಿ ಹಂತದಲ್ಲೂ ಕನ್ನಡದ ಅಸ್ಮೀತೆ ಉಳಿಯಬೇಕು ಎಂದು ಮಡಿಕೇಶ್ವರ ಬಿ.ಜಿ.ತುಂಬಗಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ 71ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಇಂದು ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಗೋಡೆಗಳ ಮೇಲೆ ಕನ್ನಡದ ಘೋಷಣೆಗಳನ್ನು ಬರೆಯುತ್ತೇವೆ. ಫಲಕಗಳ ಮೇಲೆ ಕನ್ನಡದ ಘೋಷವಾಕ್ಯಗಳನ್ನು ಮೂಡಿಸುತ್ತೇವೆ. ಆದರೆ ಗೋಡೆಗಳು,ಫಲಕಗಳ ಮೇಲೆ ಕನ್ನಡ ಬರೆದ ಮಾತ್ರಕ್ಕೆ ಕನ್ನಡ ಉಳಿಯುವುದಿಲ್ಲ ನಮ್ಮ ಪ್ರತಿಯೊಬ್ಬರ ಹೃದಯದ ಅಂತರoಗದ ಗೋಡೆಯ ಮೇಲೆ ಕನ್ನಡ ಶಾಶ್ವತವಾಗಿ ನೆಲೆಸಬೇಕು. ಆಗ ಮಾತ್ರ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ ಮತ್ತು ಮುಂದಿನ ಪೀಳಿಗೆಗೂ ಹೆಮ್ಮೆಯಿಂದ ಸಾಗುತ್ತದೆ ಎಂದು ಹೇಳಿದರು.
ರಾಷ್ಟçಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಆನಂದ ಕೋಲಾರ ಅವರು, ನಮ್ಮ ಭಾಷೆ ಕನ್ನಡ.ಮೂರು ವರ್ಷಗಳಿಗೂ ಮಿಗಿಲಾದ ಸಾಹಿತ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಅನೇಕ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯ ಕೇವಲ ರಾಜ್ಯೋತ್ಸವದ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡ ನಾಡಿನ ಸೊಬಗು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು.ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಮೌಲ್ಯಗಳನ್ನು ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡ ವಾಯ್.ಎಚ್.ವಿಜಯಕರ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ,ಸಿಪಿಐ ಮೊಹ್ಮದಫಸಿವುದ್ದೀನ,ಹಿರಿಯ ಸಾಹಿತಿ ಬಿ.ಎಂ.ಹಿರೇಮಠ , ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ,ಸರ್ಕಾರಿ ಪದವಿ ಕಾಲೇಜಿನ ಎಸ್ಸಿ,ಎಸ್ಟಿ ಪ್ರಾಚಾರ್ಯ ಎಸ್.ಎಲ್.ಪಾಟೀಲ್,ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕಿ ಶಿವಲೀಲಾ ಕೊಣ್ಣೂರ,ಹೆಸ್ಕಾಂ ಗ್ರಾಹಕರ ಸಲಹಾ ಸಮೀತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇಕರ,ಕನ್ನಡಪರ ಸಂಘಟನೆಗಳ ಮುಖಂಡರಾದ ಎಂ.ಎಸ್.ಕೊಪ್ಪ, ರಾಜುಗೌಡ ತುಂಬಗಿ,ಮಲ್ಲು ಗಂಗನಗೌಡರ,ಕೆಯುಸಿ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ಚಲವಾದಿ,ಸಾಹಿತಿ ಶಿವಪುತ್ರ ಅಜಮನಿ ಇದ್ದರು.
ವಿವಿಧ ಶಾಲೆಗಳ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಗಂಗಾಮಾತಾ ಆಂಗ್ಲಮಾಧ್ಯಮ ಶಾಲೆಯವರು ಪ್ರಸ್ತುತಪಡಿಸಿದ್ದ ಕನಕನ ಕಿಂಡಿ ಮಾದರಿಗೆ ಪ್ರಥಮ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಂತಶಿಶುನಾಳ ಷರೀಫ ಮಾದರಿಗೆ ದ್ವಿತೀಯ, ಶಾರದಾ ಹಿರಿಯ ಪ್ರಾಥಮಿಕ ಶಾಲೆಯವರು ಪ್ರಸ್ತುತಪಡಿಸಿದ ಬಸವಣ್ಣನವರ ಮಾದರಿಗೆ ತೃತೀಯ ಸ್ಥಾನ ದೊರೆಯಿತು.ಸಾರಿಗೆ ಇಲಾಖೆಯಿಂದ ಕನ್ನಡದ ಧ್ವಜ,ವಿಶೇಷ ಅಲಂಕಾರ ಮಾಡಿದ್ದ ಬಸ್ ಗಮನ ಸೆಳೆಯಿತು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಟಿ.ಡಿ.ಲಮಾಣಿ ಹಾಗೂ ಗುಂಡು ಚವ್ಹಾಣ ನಿರೂಪಿಸಿದರು.







