ಮುದ್ದೇಬಿಹಾಳ : ನಾನು ನಿಮ್ಮ ಹಾಗೆ ಹವಾಯಿ ಚಪ್ಪಲ ಹಾಕಿಕೊಂಡು ನಾಟಕ ಮಾಡಿಲ್ಲ.ಬೆಂಗಳೂರು ತುಂಬ ಆಸ್ತಿ ಮಾಡಿಲ್ಲ.ಶಾಲಾ,ಕಾಲೇಜು ಮಕ್ಕಳಿಗೆ ಪುಸ್ತಕ ಕೊಟ್ಟರೂ ಇವರಿಗೆ ಸಂಕಟ.ನನ್ನ ಸಾಮಾಜಿಕ ಸೇವೆಯನ್ನು ತಿರುಚಿ ಮಾತನಾಡುತ್ತಿರುವ ಶಾಸಕ ನಾಡಗೌಡರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಾಗ್ದಾಳಿ ಮಾಡಿದರು.
ಪಟ್ಟಣದ ತಮ್ಮ ಫಾರಂ ಹೌಸ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿರೇಮುರಾಳದ ಕಾರ್ಯಕ್ರಮವೊಂದರಲ್ಲಿ ನನ್ನ ಹೆಸರು ಉಲ್ಲೇಖಿಸದೇ ಶಾಲಾ,ಕಾಲೇಜು ಮಕ್ಕಳಿಗೆ ಹತ್ತು ಸಾವಿರ ಕೊಟ್ಟು ಡಾಬಾದಲ್ಲಿ ಹೇಳಿದ್ದೇನೆ ಊಟ ಮಾಡಿ ಹೋಗಿ ಎಂದು ಹೇಳುವ ಶಾಸಕ ನಾಡಗೌಡರಿಗೆ ಹುಚ್ಚು ಹಿಡಿದಿದೆ ಎಂದು ಟೀಕಿಸಿದ ನಡಹಳ್ಳಿ,
ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ನಾನು ಇಡೀ ನಿಮ್ಮ ಮನೆತನದ ಇತಿಹಾಸವನ್ನೇ ಬಿಚ್ಚಿಡಬೇಕಾಗುತ್ತದೆ ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿತುಕೊಳ್ಳಿ ಎಂದು ನಾಡಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಎಂಜಿನಿಯರಿoಗ್,ಎo.ಬಿ.ಬಿ.ಎಸ್ ಓದಲು ಕಷ್ಟ ಎಂದು ಬಂದಾಗ ಸಹಾಯ ಮಾಡಿದ್ದೇನೆ.ಮಕ್ಕಳಿಗೆ ಕೊಟ್ಟಿರುವುದು ಇವರಿಗೆ ಸಂಕಟವಾಗಿದೆ.ಇವರ ದುರ್ಬುದ್ಧಿ ರಾಜಕಾರಣ ಗೊತ್ತಿದೆ.ಕ್ಷೇತ್ರದ ಜನ ಮುಗ್ಧರು, ಹಿಂದಿನಿoದ ನೀವು ಕುತಂತ್ರ ಮಾಡಿಕೊಂಡೇ ಬಂದಿದ್ದೀರಿ.ಸಾಮಾಜಿಕ ಕಾರ್ಯಗಳನ್ನು ರಾಜಕಾರಣಕ್ಕೆ ಹೋಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಪ್ಪತ್ತು ವರ್ಷದಿಂದ ನೋಟಬುಕ್,ಪುಸ್ತಕ ಕೊಡುವ ಮೂಲಕ ಅಕ್ಷರದಾಸೋಹ ಮಾಡಿದ್ದೇನೆ.ದೇವರ ಹಿಪ್ಪರಗಿ ಶಾಸಕನಿದ್ದ ಅವಧಿಯಲ್ಲೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ನೋಟಬುಕ್ ಕೊಟ್ಟಿದ್ದೇನೆ.1-7ನೇ ತರಗತಿ ಮಕ್ಕಳಿಗೆ ನೋಟಬುಕ್ ಕೊಟ್ಟಿದ್ದೇವೆ.ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಜ್ಞಾನ ಪಡೆದುಕೊಂಡಿದ್ದಾರೆ.ನೀವು ಇಷ್ಟು ದಿನ ನಾಟಕ ಮಾಡಿಕೊಂಡು ಬಂದಿದ್ದು ನಡೆಯುವುದಿಲ್ಲ.ನಿಮ್ಮ ಯೋಗ್ಯತೆಗೆ ಹತ್ತು ಜನಕ್ಕೆ ಸಹಾಯ ಮಾಡಿದ್ದರೆ ಅವರ ಹೆಸರು ಹೇಳಿ ನೋಡೂಣ.ರಾಜಕೀಯವಾಗಿ ಮಾತನಾಡಿ ಅದು ಬಿಟ್ಟು ವಯಕ್ತಿಕವಾಗಿ ಮಾತನಾಡುವುದು ಇವರು ಬಿಡುತ್ತಿಲ್ಲ.ಎಂಥವರಿಗೆ ವೋಟು ಹಾಕಿದ್ದೇವೋ ಎಂದು ಜನ ಪಶ್ಚಾತಾಪ ಪಡುತ್ತಿದ್ದಾರೆ.ಪ್ರತಿ ಶಾಲೆಗೂ ವರ್ಷವೂ ನೋಟಬುಕ್ ಕೊಟ್ಟು ಪ್ರೋತ್ಸಾಹ ಮಾಡಿ ಶಿಕ್ಷಣವಂತರಾಗಿ ಎಂದು ಪ್ರೋತ್ಸಾಹ ಮಾಡಿದ್ದೇನೆ.ನನ್ನಲ್ಲಿರುವ ಗುಣ ನಿನಗೆ ಬರುವುದಕ್ಕೆ ಸಾಧ್ಯವೇ ಇಲ್ಲ ಅಪ್ಪಾಜಿ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ನಿಮ್ಮ ಮನೆಯಲ್ಲಿ ಕುಡುಕರಿರಬಹುದು, ನನ್ನ ಮನೆಯಲ್ಲಿ ಇಲ್ಲ. ನಿಮ್ಮ ಮನೆಯಲ್ಲಿ ಡ್ರಗ್ಗಿಸ್ಟ್ಗಳು,ಕುಡುಕರು ಇದ್ದಾರೆ.ಕುಡಿದು ಎಲ್ಲಿ ಕೂಡುತ್ತಾರೆ ಎಂದು ಹೇಳಬೇಕೆ ? ಚುನಾವಣೆ ಸಮಯದಲ್ಲಿ ನನ್ನ ಮಗನ ಬಗ್ಗೆ ಅಪಪ್ರಚಾರ ಮಾಡಿದ್ದು ನನಗೆ ಗೊತ್ತಿದೆ.ನಿಮ್ಮ ಮಕ್ಕಳ ಬಗ್ಗೆ ನಾನು ಮಾತನಾಡಲಾ ? ನಾಗರಬೆಟ್ಟದಲ್ಲಿ ನಿಮ್ಮ ಲೀಡರ್ಗೆ ಕೇಳಿ.ಅಲ್ಲಿ ಎಂ.ಬಿ.ಬಿ.ಎಸ್ ಓದುವ 58 ಜನ ಬಡಮಕ್ಕಳಿಗೆ ತಲಾ 50 ಸಾವಿರ ರೂ.ಫೀಸ್ ಕಟ್ಟಲು ಸಹಾಯ ಹಸ್ತ ಚಾಚಿದ್ದೇನೆ.ಅವರಲ್ಲಿ ಬೇರೆ ಜಿಲ್ಲೆಯ ಮಕ್ಕಳು ಇದ್ದಾರೆ.ದತ್ತು ಮಗ ನೀವು ಸೇರಿ ತಾಲ್ಲೂಕು ಲೂಟಿ ಹೊಡೆಯುವುದನ್ನು ಬಿಡಿ.ಕಾಲೇಜಿನಲ್ಲಿ ನಾನು ಬುಕ್ ಬ್ಯಾಂಕ್ ತಗೆದಿರೋದನ್ನು ನೋಡಿ ಹೋಗಿ.ಬ್ರಿಟಿಷರ ಕುದುರೆಗಳನ್ನು ಹೇಗೆ ಎಲ್ಲಿ ಕಾಯುತ್ತಿದ್ದೀರಿ ಎಂದು ಹೇಳಬೇಕಾ ? ಎಂದು ನಡಹಳ್ಳಿ ಖಾರವಾಗಿ ಪ್ರಶ್ನಿಸಿದರು.
ಮಹೆಬೂಬ ನಗರದಲ್ಲಿ ಶಾಲೆಗೆ 60 ಲಕ್ಷ ರೂ.ಅನುದಾನ ಹಾಕಿದ್ದೆ.ಪಟ್ಟಣದ ಶಾಲೆಯಳ ದುರಸ್ತಿಗೆ ಮಂಜೂರಾಗಿದ್ದ 1.50 ಕೋಟಿ ರೂ. ಹಣವನ್ನು ಲೂಟಿ ಹೊಡೆದಿದ್ದೀರಿ ತಾನೆ ? ವೇದಿಕೆ ಮೇಲೆ ಮಾತನಾಡುವಾಗ ಮೈಮೇಲೆ ಎಚ್ಚರ ಇಟ್ಟಕೊಂಡು ಮಾತನಾಡಬೇಕು.ಡೇಟ್ ಎಕ್ಸಪೈರ್ ಆಗಿರುವ ಸೋಪು ಜನರಿಗೆ ಕೊಟ್ಟು ನಿಗಮವನ್ನು ಗುಡಿಸಿದ್ದೀರಾ. ನನ್ನ ಸುದ್ದಿಗೆ ಬಂದರೆ ನಿಮ್ಮ ಮನೆತನದ ಇತಿಹಾಸ ತಗೆದುಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಆರೇಮುರಾಳದಲ್ಲಿ ಒಂದು ಕುಟುಂಬ ಮಳೆ ಬಿದ್ದು ಮನೆಯ ಗೋಡೆ ಕುಸಿತಗೊಂಡು ಮೂವರು ಗಾಯಗೊಂಡಿದ್ದರು.ರುದ್ರಪ್ಪ ಬಂಡಿವಡ್ಡರ ಎಂಬುವರ ಕುಟುಂಬಕ್ಕೆ ನನ್ನಿಂದಾದಷ್ಟು ಸಹಾಯಹಸ್ತ ಮಾಡಿದ್ದೇನೆ.ಪಿಡಿಒ,ಸಿಎಸ್,ಇಒಗೆ ಕರೆ ಮಾತನಾಡಿ ಅವರಿಗೆ ಸಹಾಯ ಮಾಡಲು ತಿಳಿಸಿದ್ದೆ.ಪಿಡಿಒ ಕುಂಬಾರ ಎಂಬುವರು ಆ ಕುಟುಂಬದವರಿಗೆ ಸಹಾಯ ಮಾಡಿದ್ದಕ್ಕೆ ಅಭಿನಂದಿಸುತ್ತೇನೆ.ಶಾಸಕನಾಗಿದ್ದುಕೊoಡು ಆ ಬಡವನಿಗೆ ಅಂದು ಹತ್ತು ಸಾವಿರವಾದರೂ ಕೊಟ್ಟಿದ್ದೀಯಾ ? ನಿನಗೆ ನಾಚಿಗೆಯಾಗುವುದಿಲ್ಲವೇ ? ಮೂವ್ವತ್ತು ವರ್ಷ ರಾಜಕಾರಣದಲ್ಲಿ ತಾಲ್ಲೂಕಿನಲ್ಲಿ ತಿಂದು ತೇಗಿ ಬೆಂಗಳೂರಿನಲ್ಲಿ ಅರಮನೆಯಂತ ಮನೆಗಳನ್ನು ಕಟ್ಟಿಸಿಕೊಂಡು ಇಲ್ಲಿ ಬಂದು ನಾಟಕ ಮಾಡುತ್ತೀಯಾ ಎಂದು ಏಕವಚನದಲ್ಲಿಯೇ ಶಾಸಕರ ವಿರುದ್ಧ ನಡಹಳ್ಳಿ ವಾಗ್ದಾಳಿ ನಡೆಸಿದರು. ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡ ಮಲಕೇಂದ್ರಗೌಡ ಪಾಟೀಲ,ಮಲ್ಲಿಕಾರ್ಜುನ ತಂಗಡಗಿ,ಬಸವರಾಜ ಗುಳಬಾಳ,ಗಿರೀಶಗೌಡ ಪಾಟೀಲ,ಮದನಸ್ವಾಮಿ ಹಿರೇಮಠ,ಗೌರಮ್ಮ ಹುನಗುಂದ,ನರಸಮ್ಮ ಗುಬಚಿ ಮೊದಲಾದವರು ಇದ್ದರು.
ಗುಲಾಮಗಿರಿಗೆ ತಾಲ್ಲೂಕನ್ನು ತಗೆದುಕೊಂಡು ಹೋಗುತ್ತೀಯಾ ಎಂದು ವಾಗ್ದಾಳಿ ನಡೆಸಿದ ನಡಹಳ್ಳಿ ಅವರು, ನೀವು ಆದಿಲ್ಶಾಹಿಗೆ ಸಹಾಯ ಮಾಡಿರಬೇಕು.ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯನನ್ನು ಕೊಲ್ಲಲು ಆದಿಲಶಾಹಿಗೆ ಸಹಾಯ ಮಾಡಿದ ಮನೆತನ ನಮ್ಮದು ಎಂದು ತಾವೇ ಹೇಳಿಕೊಂಡಿದ್ದೀರಲ್ಲವೇ ? ಬಡವರ ಮಕ್ಕಳ ಪರ ಸಹಾಯ ಮಾಡಿದರೆ ಇವರಿಗೆ ಸಂಕಟ.ಕುತoತ್ರ ಮಾಡುವುದು ರೈತರ ಹೊಲಕ್ಕೆ ನೀರು ಬರದಂತೆ ಮಾಡುವುದು.ಹಳ್ಳಿಗಳಲ್ಲಿ ಒಂದೇ ರಸ್ತೆ ಮಾಡಿದರೂ ಸಂಕಟ,ಕೆರೆ ತುಂಬಿದರೂ ಸಂಕಟ,ಪುಸ್ತಕ ಕೊಟ್ರು ಸಂಕಟ,ಶಾಲೆ ಮಕ್ಕಳ ಫೀಸ್ ಕಟ್ಟಿದರೂ ಸಂಕಟ.ಭಗವoತನನ್ನು ಯಾಮಾರಿಸುವುದಕ್ಕೆ ಆಗುತ್ತದೆಯೇ ? ಮೇಲೆ ಹೋದಾಗ ಏನು ಉತ್ತರ ಕೊಡುತ್ತೀರಾ ? ಎಂದು ಪ್ರಶ್ನಿಸಿದರು.
ಮುಂದಿನ ಸಲ ಅಪ್ಪಾಜಿ ನೀನಾಗಲೀ, ನಿಮ್ಮ ಮನೆತನದನವರು ಯಾರೊಬ್ಬರೂ ಈ ಕ್ಷೇತ್ರದಲ್ಲಿ ಎಂ.ಎಲ್.ಎ ಆಗುವುದಿಲ್ಲ.ಜನಕ್ಕೆ ತಪ್ಪಿನ ಅರಿವು ಆಗಿದೆ.ಮತ್ತೆ ನಾಟಕ ಮಾಡುತ್ತೀಯಾ ಅಂತ ಗೊತ್ತು. ಇದು ನನ್ನ ಕೊನೆಯ ಚುನಾವಣೆ ಎಂದು ಕಳೆದ ಮೂರು ಬಾರಿ ನಾಟಕ ಮಾಡುತ್ತಲೇ ಬಂದಿದ್ದೀರಿ.ನೀವು ಜನವಿರೋಧಿ,ಅಭಿವೃದ್ಧಿ ವಿರೋಧಿ ಎಂದು ಗೊತ್ತಿದೆ ಎಂದು ನಡಹಳ್ಳಿ ಹೇಳಿದರು.







