ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘಟನೆ (ಚುನಪ್ಪ ಪೂಜೇರಿ ಬಣ) ವತಿಯಿಂದ ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ್ಸ್ ಹಾಗೂ ನಾಯನೇಗಲಿ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋದಾಮುಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.
ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಶುರ್ಸ್ ಆವರಣದಲ್ಲಿ ಸಕ್ಕರೆ ಗೋದಾಮಿಗೆ ಬೀಗ ಹಾಕಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ , ಕಬ್ಬು ಬೆಳೆಗಾರರಿಗೆ 5500 ರೂ.ದರ ನೀಡಬೇಕು.ರಾಜ್ಯ ಸರ್ಕಾರ ಎಸ್ಎಪಿ 1000 ರೂ.ನೀಡಬೇಕು.ಎಂ.ಎಸ್.ಪಿ 60 ರೂ.ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಇರಿಸಿಕೊಂಡು ಹೋರಾಟ ಆರಂಭಿಸಲಾಗಿದೆ.ಯಾವುದೇ ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಒಂದು ಕೆಜಿಯೂ ಹೊರಗಡೆ ಹೋಗುವಂತಿಲ್ಲ.ದರ ಅಂತಿಮಗೊಳ್ಳುವವರೆಗೂ ಕಾರ್ಖಾನೆ ಆರಂಭಿಸುವoತಿಲ್ಲ ಎಂದು ಹೇಳಿದರು.
ಬಾಲಾಜಿ ಶುಗರ್ಸ್ನ ಎಜಿಎಂ ಗಿರೀಶ ಪಾಟೀಲ,ರೈತರಾದ ದೇವರಾಜ ಗುಂಡಕನಾಳ, ಶಶಿಕಾಂತ್ ಪಾಟೀಲ್. ಸೀತಪ್ಪ ಗಣಿ, ಚಂದ್ರು ಗುಬಚಿ, ನಿಂಗಣ್ಣ ಯಾಳಗಿ, ಅಮೋಘಸಿದ್ದ, ಗುರು ರಾಯಗೊಂಡ, ಶಿವನಗೌಡ ಜಲಪೂರ, ಚಂದ್ರು ಗುಬಚಿ, ಮುತ್ತು ಲಕ್ಕಣ್ಣವರ, ಮಾಳಿಂಗರಾಯ ಗುಬಚಿ, ರಮೇಶ್ ಲಕ್ಕಣ್ಣವರ ಇದ್ದರು. ಸಿಪಿಐ ಮೊಹ್ಮದಫಸಿವುದ್ದೀನ, ಪಿಎಸ್ಐ ವಿಜಯಕುಮಾರ ತಳವಾರ ಸೇರಿದಂತೆ ಪೊಲೀಸರು ಭದ್ರತೆ ಒದಗಿಸಿದ್ದರು.
50 ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನು:
ಮೂಲಗಳ ಪ್ರಕಾರ ಬಾಲಾಜಿ ಹಾಗೂ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಗೋದಾಮುಗಳಲ್ಲಿ ಒಟ್ಟು 50ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನು ಇದ್ದು ಇದೀಗ ಅದನ್ನು ಹೊರಗಡೆ ಹೋಗದಂತೆ ರೈತ ಸಂಘದಿoದ ಬೀಗ ಹಾಕಿ ಪ್ರತಿಭಟನೆ ಮುಂದುವರೆಸಲಾಗಿದೆ.







