ಮುದ್ದೇಬಿಹಾಳ : ತಾಲೂಕಿನ ಯರಗಲ್ಲ ಗ್ರಾಮದಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯು 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗಾಗಿ ತನ್ನ ನೂತನ ಖರೀದಿ ದರವನ್ನು ಅಧಿಕೃತವಾಗಿ ಪ್ರಕಟಿಸಿದ್ದು ಒಟ್ಟು 3600 ರೂ.ದರ ಘೋಷಣೆ ಮಾಡಿದೆ. ಏತನ್ಮಧ್ಯೆ ಕಬ್ಬು ಬೆಳೆಗಾರರ ಪ್ರತಿಭಟನೆ,ಬೇಡಿಕೆಗಳಿಗೆ ಸ್ಪಂದಿಸುವ ದರವನ್ನು ಕಾರ್ಖಾನೆ ಘೋಷಿಸಿದ್ದು ಕಾರ್ಖಾನೆಯಿಂದ ಕಬ್ಬು ನುರಿಸುವ ಹಂಗಾಮು ಶುಕ್ರವಾರದಿಂದಲೇ ಚಾಲನೆ ನೀಡಲಾಯಿತು.
ಕಾರ್ಖಾನೆಯ ಆವರಣದಲ್ಲಿ ಕೇನ್ ಕ್ಯಾರಿಯರ್ಗೆ ಪೂಜೆ ಮಾಡುವ ಮೂಲಕ ಈ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಾರ್ಖಾನೆಯ ಅಧ್ಯಕ್ಷ ಹಣಮಂತಗೌಡ ಪಾಟೀಲ್, ಹಿರಿಯ ನಿರ್ದೇಶಕರಾದ ರಾಹುಲಗೌಡ ಪಾಟೀಲ ಅವರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಜಂಟಿ ಸಭೆಯ ತೀರ್ಮಾನದಂತೆ ಈ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೇನ್ ಕ್ಯಾರಿಯರ್ ಪೂಜಾ ಸಮಾರಂಭದಲ್ಲಿ ನಿರ್ದೇಶಕರಾದ ಅಧಿಕಗೌಡ ಪಾಟೀಲ,ಪ್ರಜ್ವಲಗೌಡ ಪಾಟೀಲ,ಡಾ.ಅಜೀತ ಕನಕರೆಡ್ಡಿ,ಶ್ರೀನಿವಾಸ ಅರಕೇರಿ,ಪ್ರಫುಲ್ ಪಾಟೀಲ,ಎಚ್.ಜಿ.ಪಾಟೀಲ,ಪಿಆರ್ಓ ಮಾರುತಿ ಗುರವ ಹಾಗೂ ಕಾರ್ಖಾನೆಯ ಕಬ್ಬು ಮಾರುಕಟ್ಟೆ ವಿವಿಧ ವಿಭಾಗದ ಅಧಿಕಾರಿಗಳು ,ರೈತರು ಇದ್ದರು. ಮೂರು ಹಂತಗಳಲ್ಲಿ ಹಣ ಪಾವತಿ: ಕಾರ್ಖಾನೆಯು ಕಬ್ಬು ಪೂರೈಸುವ ರೈತರಿಗೆ ಮೂರು ಹಂತಗಳಲ್ಲಿ ಬಿಲ್ ಪಾವತಿ ಮಾಡಲು ನಿರ್ಧರಿಸಿದೆ:
ಮೊದಲ ಕಂತು : ಕಬ್ಬು ಪೂರೈಸಿದ ತಕ್ಷಣವೇ ಪ್ರತಿ ಮೆಟ್ರಿಕ್ ಟನ್ಗೆ ರೂ. 3,500/- ರಂತೆ ಮೊದಲ ಮುಂಗಡ ಹಣ ಸಿಗಲಿದೆ. ಎರಡನೇ ಕಂತು: ಪ್ರಸಕ್ತ ಹಂಗಾಮು ಮುಕ್ತಾಯಗೊಂಡ ನಂತರ ಪ್ರತಿ ಮೆಟ್ರಿಕ್ ಟನ್ಗೆ ಹೆಚ್ಚುವರಿಯಾಗಿ ರೂ. 100/- ಪಾವತಿಸಲಾಗುವುದು.ಅಂತಿಮ ಬೋನಸ್: ಮಾರುಕಟ್ಟೆಯಲ್ಲಿ ಸಕ್ಕರೆಯ ಸರಾಸರಿ ದರ ಪ್ರತಿ ಕೆ.ಜಿ.ಗೆ ರೂ. 45 ಕ್ಕಿಂತ ಹೆಚ್ಚಾದಲ್ಲಿ, ಅದರಿಂದ ಬರುವ ಲಾಭದ ಶೇ. 75 ರಷ್ಟನ್ನು ಕಬ್ಬು ಬೆಳೆಗಾರರಿಗೆ ಬೋನಸ್ ರೂಪದಲ್ಲಿ ಹಂಚಲಾಗುವುದು ಎಂದು ತಿಳಿಸಲಾಗಿದೆ. ಸಕ್ಕರೆ ದರ ಆಧರಿಸಿ ಸಿಗಲಿರುವ ಒಟ್ಟು ದರ (ಪ್ರತಿ ಟನ್ಗೆ):
ಸಕ್ಕರೆ ಬೆಲೆ ರೂ. 48 ಆದಲ್ಲಿ: ಕಬ್ಬಿನ ಒಟ್ಟು ದರ ರೂ. 3,650 (ರೈತರ ಹೆಚ್ಚುವರಿ ಲಾಭ: ರೂ. 38)
ಸಕ್ಕರೆ ಬೆಲೆ ರೂ. 50 ಆದಲ್ಲಿ: ಕಬ್ಬಿನ ಒಟ್ಟು ದರ ರೂ. 3,850 (ರೈತರ ಹೆಚ್ಚುವರಿ ಲಾಭ: ರೂ. 190)
ಸಕ್ಕರೆ ಬೆಲೆ ರೂ. 55 ಆದಲ್ಲಿ: ಕಬ್ಬಿನ ಒಟ್ಟು ದರ ರೂ. 4,350 (ರೈತರ ಹೆಚ್ಚುವರಿ ಲಾಭ: ರೂ. 565)
ಬರಗಾಲದ ಹಿನ್ನೆಲೆ: ಕಳೆದ ವರ್ಷಕ್ಕಿಂತ ರೂ. 386 ಹೆಚ್ಚಳ
ಕಳೆದ ಕೆಲವು ವರ್ಷಗಳಿಂದ ಉತ್ಪಾದನಾ ವೆಚ್ಚಕ್ಕಿಂತ ಸಕ್ಕರೆ ಮಾರಾಟ ದರ ಕಡಿಮೆ ಇದ್ದಿದ್ದರಿಂದ ಕಾರ್ಖಾನೆಯು ಆರ್ಥಿಕ ಸಂಕಷ್ಟದಲ್ಲಿದೆ. ಆದಾಗ್ಯೂ, ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲ ಇರುವುದರಿಂದ ರೈತರ ಹಿತದೃಷ್ಟಿಯಿಂದ ಕಳೆದ ಹಂಗಾಮಿಗಿoತ ರೂ. 386/- ಗಳಷ್ಟು ದರವನ್ನು ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ದರವು ಕೇವಲ ಈ ವರ್ಷದ ಹಂಗಾಮಿಗೆ ಮಾತ್ರ ಅನ್ವಯವಾಗುವ ವಿಶೇಷ ವಿನಾಯಿತಿಯಾಗಿದ್ದು, ಇದನ್ನು ಮುಂದಿನ ವರ್ಷಗಳಿಗೆ ಮುನ್ಸೂಚನೆ ಎಂದು ಪರಿಗಣಿಸುವಂತಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಬ್ಬು ಕಟಾವಿಗೆ ಆಡಳಿತ ಮಂಡಳಿ ಕರೆ :
ಪ್ರಸ್ತುತ ತಾಲೂಕಿನಲ್ಲಿ ತೀವ್ರ ನೀರಿನ ಕೊರತೆ ಇರುವುದರಿಂದ ಕಬ್ಬಿನ ಬೆಳೆ ಒಣಗಿ ರೈತರಿಗೆ ನಷ್ಟವಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟ ತಪ್ಪಿಸಲು ಇಂದಿನಿAದಲೇ (ನ.6, 2026) ಕಬ್ಬು ಕಟಾವು ಪ್ರಕ್ರಿಯೆಯನ್ನು ಆರಂಭಿಸಿ ಕಾರ್ಖಾನೆಗೆ ಪೂರೈಸುವಂತೆ ಕಾರ್ಖಾನೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ಜಂಟಿಯಾಗಿ ವಿನಂತಿಸಿದ್ದಾರೆ.







