ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ –ಮದರಿ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೆವೇಟ್ ಲಿಮಿಟೆಡ್ ಕಾರ್ಖಾನೆಯು ಟನ್ ಕಬ್ಬಿಗೆ ಒಟ್ಟು ನಾಲ್ಕು ಸಾವಿರ ರೂ.ಘೋಷಣೆ ಮಾಡುವ ಮೂಲಕ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ.
ಕಾರ್ಖಾನೆಯು ಸನ್ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಒಟ್ಟು 4,000 ರೂ.ದರ ನಿಗದಿಪಡಿಸಿದೆ.ಈ ಕುರಿತು ನ.13ರಂದು ಕಾರ್ಖಾನೆಯ ಆಡಳಿತ ಮಂಡಳಿಯು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ಬಹಿರಂಗಪಡಿಸಿದೆ.
ಕಬ್ಬು ಬೆಳೆಗಾರರ ಬೇಡಿಕೆ, ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಹಾಗೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ದರ ನಿಗದಿಪಡಿಸಲಾಗಿದೆ ಎಂದು ಕಾರ್ಖಾನೆಯು ತಿಳಿಸಿದೆ.
ಕಾರ್ಖಾನೆಯು ಪ್ರಕಟಿಸಿರುವ ದರದ ವಿವರದಂತೆ, ಪ್ರತಿ ಮೆಟ್ರಿಕ್ ಟನ್‌ಗೆ ಕಬ್ಬಿನ ಖರೀದಿ ದರವಾಗಿ 3,600 ರೂ., ಎರಡನೇ ಕಂತಾಗಿ 200 ರೂ.ಹಾಗೂ ಮೂರನೇ ಕಂತಾಗಿ 200ರೂ. ಸೇರಿ ಒಟ್ಟು 4,000 ರೂ. ಪಾವತಿಸಲಾಗುವುದು ಎಂದು ತಿಳಿಸಿದೆ.
ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ಹಣಮಂತಗೌಡ ಪಾಟೀಲ್ ತಿಳಿಸಿದ್ದಾರೆ.
2026-27ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ನಿಗದಿಪಡಿಸಿದ ದರದಂತೆ ಪಾವತಿ ಮಾಡಲಾಗುವುದು.ಈಗ ಬರಗಾಲ ಬಿದ್ದಿದ್ದು ಈ ಸಮಯದಲ್ಲಿ ಕಾರ್ಖಾನೆ ರೈತರ ನೆರವಿಗೆ ನಿಲ್ಲಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ದರವನ್ನು ಪ್ರಕಟಿಸಿದ್ದೇವೆ.ರೈತರು ಗುಣಮಟ್ಟದ ಕಬ್ಬನ್ನು ಕಾರ್ಖಾನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸುವ ಕಾರ್ಯ ಮಾಡಬೇಕು ಎಂದು ತಿಳಿಸಿದ್ದಾರೆ.







