ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು ಗುಜರಾತ ಮೂಲದ ಅಂತರಾಜ್ಯ ಮಟ್ಟದ ಮೂವರು ಕಳ್ಳರನ್ನು ಬಂಧಿಸಿ ಅವರಿಂದ ತುಂಡರಿಸಿದ ಬೆಳ್ಳಿ ಹಾಗೂ ಬೆಳ್ಳಿ ತುಣುಕು ಸೇರಿ ಹಲವು ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು,
ಕಳೆದ ಜು. 5 ರಂದು ರಾತ್ರಿ ಬಸರಕೋಡದ ಪವಾಡಬಸವೇಶ್ವರ ದೇವಸ್ಥಾನದ ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಕೀಲಿಗಳನ್ನು ಮುರಿದು ದೇವಸ್ಥಾನದಲ್ಲಿದ್ದ 32 ಕೆಜಿ ತೂಕದ ಬೆಳ್ಳಿಯ ಮೂರ್ತಿ ಕಳವು ಮಾಡಲಾಗಿತ್ತು. ಇದರ ಮೌಲ್ಯ 51.20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಕುರಿತು ದೇವಸ್ಥಾನದ ಕಮೀಟಿ ಅಧ್ಯಕ್ಷ ಕರನಂದೆಪ್ಪ ಯಮನಪ್ಪ ಬಿರಾದಾರ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಪತ್ತೆಗೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು. ಬ.ಬಾಗೇವಾಡಿ ಡಿಎಸ್ಪಿ ಚಂದ್ರಕಾoತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹಮ್ಮದ್ ಫಸಿಯುದ್ದೀನ, ಪಿಎಸ್ಐ ಸಂಜಯ ತಿಪ್ಪರೆಡ್ಡಿ, ಅಪರಾಧ ವಿಭಾಗದ ಪಿಎಸೈ ಆರ್.ಎಸ್. ಭಂಗಿ ಹಾಗೂ ನುರಿತ ಸಿಬ್ಬಂದಿಯನ್ನೊಳಗೊAಡ ಒಟ್ಟು 4 ತನಿಖಾ ತಂಡಗಳನ್ನು ರಚಿಸಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಅಧಿಕಾರಿಗಳು ಗುಜರಾತ್ವರೆಗೂ ತೆರಳಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿಸಿದರು. ಬಂಧಿತರ ಪೈಕಿ ಗುಜರಾತ್ ಮೂಲದ ಸುರೇಶಕುಮಾರ ಶಾಂತಿಲಾಲ ಸೋನಿ(51) ಈತನ ಮೇಲೆ ಈಗಾಗಲೇ ಗುಜರಾತ್ ರಾಜಸ್ತಾನದ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ.ಇನ್ನುಳಿದಂತೆ ಬ್ರಹ್ಮಾರ್ ಟೋಪಿಯಾ ನೇಟ್ (35) ಹಾಗೂ ಇಂದ್ರಜೀತ್ ಮನಿಯಾರ್ ನೇಟ್(33) ಬಂಧಿತರಾಗಿದ್ದಾರೆ. ವಿಚಾರಣೆ ವೇಳೆ ಇವರು ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳ್ಳತನ ಮಾಡಿದ ಬಸವೇಶ್ವರ ಮೂರ್ತಿ ಪೈಕಿ ಮೂರ್ತಿಯ ಪ್ರಮುಖ ಭಾಗವನ್ನು 4 ಭಾಗಗಳಾಗಿ ತುಂಡರಿಸಿ, ಇನ್ನುಳಿದ ಭಾಗವನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ಮಾರಾಟ ಮಾಡಿದ ಬಗ್ಗೆ ಹೇಳಿದ್ದು, ಆ ಪ್ರಕಾರ ತನಿಖೆ ಕೈಗೊಂಡು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ,ಸಿಪಿಐ ಮೊಹ್ಮದ ಫಸಿವುದ್ದೀನ್,ಪಿಎಸೈ ಸಂಜಯ ತಿಪರೆಡ್ಡಿ,ಆರ್.ಎಸ್.ಭಂಗಿ, ಆರೀಫ ಮುಶಾಪುರಿ ಸೇರಿದಂತೆ ಹಲವರು ಇದ್ದರು.
ವಶಪಡಿಸಿಕೊಂಡ ಸಾಮಗ್ರಿ :4 ಕೆಜಿಯ ಮೂರ್ತಿಯ ತುಂಡರಿಸಿದ ತುಣುಕುಗಳು, 23 ಕೆಜಿ ತೂಕದ ಬೆಳ್ಳಿಯ ತುಣುಕು, 67,600 ರೂ. ನಗದು, 2 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಕಾರ್, ಕೃತ್ಯಕ್ಕೆ ಬಳಸಿದ 2 ಕಬ್ಬಿಣದ ರಾಡ್ಗಳನ್ನು ವಶಕ್ಕೆ ಪಡೆಯಲಾಗಿದೆ.ಒಟ್ಟು 52,70,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಆರೋಪಿತರು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ತಿಳಿದು ಬಂದಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕಳ್ಳರನ್ನು ಬಂಧಿಸಿದ ಪೊಲೀಸರಿಗೆ ಸನ್ಮಾನ ಪತ್ರ,ಅಭಿನಂದನೆ: ಒಂದು ತಿಂಗಳುಗಳ ಕಾಲ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿ ಕಳ್ಳತನದ ಪ್ರಕರಣವನ್ನು ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ ತಂಡಕ್ಕೆ ಐಜಿಪಿ,ಎಸ್ಪಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.ಅಲ್ಲದೇ ಈ ಘಟನೆಯ ಯಶಸ್ಸನ್ನು ಡಿಐಜಿ ಕಚೇರಿಗೆ ಪತ್ರ ಬರೆದು ತಿಳಿಸಲಾಗುವುದು ಎಂದು ಐಜಿಪಿಯವರು ಮಾಹಿತಿ ನೀಡಿದರು.







