ಮುದ್ದೇಬಿಹಾಳ : ರಾಷ್ಟ್ರೀಯ ಮಟ್ಟದ ಇಬಿಕ್ ರೀಡಥಾನ್ -2,2025ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಟ್ಟಣದ ಬಸವ ಇಂಟರ್ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಹರ್ಲಾಪೂರ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಬಸವ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಮಂಗಳವಾರ ನಡೆದ ಸಾಧನೆ ತೋರಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ್ಯ, ಅರ್ಥಗ್ರಹಣ, ಶಬ್ದಸಂಪತ್ತು ಹಾಗೂ ವಿಮರ್ಶಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆ ತೋರಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ(ಹರ್ಲಾಪೂರ) ಮಾತನಾಡಿ, ಇಬಿಕ್ ಭಾಷಾ ಪ್ರಯೋಗಾಲಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಈ ರಾಷ್ಟ್ರೀಯ ಅಭಿಯಾನವು ಬುಕ್ರ್ ತರಗತಿ, ಕೇಂಬ್ರಿಜ್ ಇಂಗ್ಲಿಷ್ ಹಾಗೂ ದಿ ಟೈಮ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ನಡೆದಿದ್ದ ಅಂತರ್ಜಾಲ ಆಧಾರಿತ ವೇದಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿವಿಧ ಪುಸ್ತಕಗಳು ಹಾಗೂ ಕಥೆಗಳನ್ನು ಓದಲು ಮತ್ತು ಧ್ವನಿಮುದ್ರಿತ ಪುಸ್ತಕಗಳನ್ನು ಆಲಿಸಲು ಅವಕಾಶ ಕಲ್ಪಿಸಲಾಗಿತ್ತು.ಸ್ಪರ್ಧೆಯಲ್ಲಿ ವೇದಾಂತ 119 ಪುಸ್ತಕಗಳನ್ನು ಹಾಗೂ ಮನೀಷ್ ಜಾಟ್ 121 ಪುಸ್ತಕಗಳನ್ನು ಓದಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ ಜಾಟ್, ಲೀಲಾ, ಜಾಟ್ ನಾಗರಾಜ ಹಾಗೂ ಮಹಾಲಕ್ಷ್ಮಿ ಸೇರಿದಂತೆ ಪೋಷಕರು ಹಾಗೂ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
ಕ್ರೀಡಾ ಕ್ಷೇತ್ರದಲ್ಲೂ ಸಾಧನೆ.
ಪಟ್ಟಣದ ಬಸವ ಇಂಟರನ್ಯಾಷನಲ್ ಸ್ಕೂಲ್ ಮಕ್ಕಳು ಶೈಕ್ಷಣಿಕ ಸಾಧನೆಯ ಜೊತೆಗೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಸಂಸ್ಥೇಯ ಆಡಳಿತ ಮಂಡಳಿ ತಿಳಿಸಿದೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸ್ಕೇಟಿಂಗ್ ಇಂಟರ್ ಸ್ಕೂಲ್ ಕಾಂಪಿಟೇಷನ್ನಲ್ಲಿ 6ನೇ ತರಗತಿ ವಿದ್ಯಾರ್ಥಿ ನಾಗಶೃತನ್ ಇಲ್ಲೂರ್ ಅವರು ಸ್ಕೇಟಿಂಗ್ನ ಇನ್ಲೈನ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಅಲ್ಲದೇ ರೋಪ್ ಸ್ಕಿಪ್ಪಿಂಗ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ನಲ್ಲೂ ಶಾಲೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಅಥ್ಲೆಟಿಕ್ಸ್ನಲ್ಲಿ 4ನೇ ತರಗತಿ ವಿದ್ಯಾರ್ಥಿ ಜೀಶಾನ್ ಸೂರಜ್ ರಿಸಾಲ್ದಾರ ಉತ್ತಮ ಪ್ರದರ್ಶನ ನೀಡಿದ್ದರೆ, 9ನೇ ತರಗತಿ ವಿದ್ಯಾರ್ಥಿ ಉಮೇರ್ ಡವಳಗಿ ನಾಯಕತ್ವದ ಕಬಡ್ಡಿ ತಂಡ ಸಿಬಿಎಸ್ಇ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿಧ್ಯಾರ್ಥಿಗಳಾಗಿದ್ದಾರೆ.







