ಮುದ್ದೇಬಿಹಾಳ : ಹಾಸ್ಯ ಕಲಾವಿದ ,ಶಿಕ್ಷಕ ಗೋಪಾಲ ಎನ್.ಹೂಗಾರ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಲಾಸಿಂಚನ ಸಾಂಸ್ಕೃತಿಕ ಸಂಸ್ಥೆಯಿoದ ಗೋಪಾಲ ಹೂಗಾರ ಅವರ ಜನುಮದಿನದ ನಿಮಿತ್ಯವಾಗಿ ಯರಗಲ್ಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 500 ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸುವ ಕಾರ್ಯ ಕೈಗೊಳ್ಳಲಾಯಿತು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಿ.ಧಮ್ಮೂರಮಠ ಮಾತನಾಡಿ, ಭಗವಂತ ಎಲ್ಲರಿಗೂ ಎಲ್ಲವನ್ನೂ ಕೊಟ್ಟಿರುತ್ತಾನೆ. ಆದರೆ ಕೊಡುವ ಮನಸ್ಸನ್ನು ಕೆಲವರಿಗೆ ಮಾತ್ರ ನೀಡಿರುತ್ತಾನೆ. ಅಂತಹ ಕೆಲವರಲ್ಲಿ ಹಾಸ್ಯ ಕಲಾವಿದರಾದ ಗೋಪಾಲ ಹೂಗಾರ ಕೂಡ ಒಬ್ಬರಾಗಿದ್ದಾರೆ. ಅವರು ಹುಟ್ಟಿದ ಊರಿನ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಜನುಮದಿನದ ಸಂದರ್ಭದಲ್ಲಿ ಸಹಾಯ ಮಾಡಿರುವುದು ಅತ್ಯಂತ ಅರ್ಥಪೂರ್ಣವಾದ ಸಾಮಾಜಿಕ ಕಾರ್ಯ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ಎಂ. ಬೆಳಗಲ್ಲ ಮಾತನಾಡಿ, ದೊಡ್ಡ ದೊಡ್ಡ ಸಿರಿವಂತರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಅನವಶ್ಯಕವಾಗಿ ಹಣ ವ್ಯಯ ಮಾಡುವ ಬದಲು, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಈ ರೀತಿಯಾಗಿ ಸಹಾಯ ಮಾಡಿದರೆ ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಕಾರ್ಯಗಳಿಂದ ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಹೆಚ್ಚುವುದರ ಜೊತೆಗೆ ಹಾಜರಾತಿ ಮತ್ತು ಕಲಿಕೆಯಲ್ಲಿಯೂ ಉತ್ತಮ ಬೆಳವಣಿಗೆ ಕಂಡುಬರುತ್ತದೆ ಎಂದರು.
ಹಾಸ್ಯ ಕಲಾವಿದ ಗೋಪಾಲ ಇಂಚಗೇರಿ ಮಾತನಾಡಿ, ಪ್ರತಿವರ್ಷ ನಮ್ಮ ಜನುಮದಿನವನ್ನು ವೃದ್ಧಾಶ್ರಮ, ಅನಾಥಾಶ್ರಮ, ಎಚ್‌ಐವಿ ಪೀಡಿತ ಮಕ್ಕಳು, ಕುಷ್ಠರೋಗಿಗಳು, ಮಂಗಳಮುಖಿಯರು ಹಾಗೂ ಜೋಪಡಿಯಲ್ಲಿ ವಾಸಿಸುವ ಅಲೆಮಾರಿ ಜನಾಂಗದವರೊAದಿಗೆ ಆಚರಿಸುತ್ತಾ ಬಂದಿದ್ದೇವೆ. ಈ ಬಾರಿ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ಜನುಮದಿನ ಆಚರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಹಾಯ-ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಮಂಗಳಾ ಎಂ. ಗಡೇದ ,ಸಿಆರ್‌ಪಿ ಎ.ಸಿ.ಕಸಬೇಗೌಡರ,ಊರಿನ ಗಣ್ಯರಾದ ಚಂದ್ರಾಮಪ್ಪ ಡಮನಾಳ , ಬಸವರಾಜ ಡಮನಾಳ,ಶಾಂತಗೌಡ ಪಾಟೀಲ ,ಭೀಮರಾಯ ಹಳ್ಳೂರ ,ಶರಣು ಗಂಗಾವತಿ,ಧರಿಯಪ್ಪ ಜಂಬಗಿ ,ಗುರುರಾಜ ಬಿರಾದಾರ ,ಮಹಾದೇವಪ್ಪ ಗಡೇದ, ಶಿವಾನಂದ ಪಟೇದ,ಎಸ್. ನ್. ಹೂಗಾರ, ಸಿದ್ದು ಹೂಗಾರ,ಲಕ್ಷ್ಮೀ ಇಂಚಗೇರಿ, ಕಲಾವಿದರಾದ ಗೋಪಾಲ ಇಂಚಗೇರಿ, ಕೃಷ್ಣ ಬೀದರ,ಮಲ್ಲು ಮುದ್ದೇಬಿಹಾಳ, ಹನುಮಂತ ಮಹಾಲಿಂಗಪೂರ ಹಾಗೂ ಪಾಲಕರು ಕಲಾವಿದರು, ಮುಖ್ಯಶಿಕ್ಷಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







