ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು ಶೇ.92.95ರಷ್ಟು ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 2625 ಮತದಾರರಲ್ಲಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಆರಂಭದಲ್ಲಿ ಚುರುಕುಗೊಂಡಿದ್ದ ಮತದಾನ ಪ್ರಕ್ರಿಯೆ ಮದ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತ್ತು.ಅಂತಿಮ ಸಮಯ ಮೀರುವ ಮುನ್ನವೇ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಒಂದು ಮತಗಟ್ಟೆಯಲ್ಲಿ ಇಬ್ಬರು ಮತದಾರರು ನಕಲಿ ಮತದಾನಕ್ಕೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕು ಬಿದ್ದ ಘಟನೆ ನಡೆಯಿತು.ಆದರೆ ಎರಡೆರಡು ಸಲ ಮತ ಚಲಾಯಿಸಲು ಮತಗಟ್ಟೆ ಅಧಿಕಾರಿಗಳು,ಪೊಲೀಸರು ಅವಕಾಶ ನೀಡಲಿಲ್ಲ.ಸ್ವತಃ ಡಿವೈಎಸ್ಪಿ ಚಂದ್ರಕಾAತ ನಂದರೆಡ್ಡಿ ಅವರೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಔದ್ರಾಮ್,ಕೇರ್ ಟೇಕರ್ ತಬಸ್ಸುಮ್ ಮುಲ್ಲಾ, ಪ್ರಭಾರ ತಹಶೀಲ್ದಾರ್ ಆನಂದ ಕೋಲಾರ,ಸಿಪಿಐ ಮೊಹ್ಮದ ಫಸಿವುದ್ದೀನ್, ಪಿಎಸ್ಐ ಸಂಜಯ ತಿಪರೆಡ್ಡಿ,ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ, ತಾಳಿಕೋಟಿ,ಆಲಮಟ್ಟಿ ಪಿಎಸೈಗಳು ಬಿಗಿ ಬಂದೋಬಸ್ತ್ ವಹಿಸಿದ್ದರು.
ಮತ ಎಣಿಕೆಗೆ 10ಟೇಬಲ್ ವ್ಯವಸ್ಥೆ ಮಾಡಲಾಗಿದ್ದು ಕೋಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.ಕಂದಾಯ ಇಲಾಖೆ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.ಫಲಿತಾಂಶ ರಾತ್ರಿ 8-9 ಗಂಟೆಯೊಳಗೆ ಲಭ್ಯವಾಗುವ ನಿರೀಕ್ಷೆ ಇದೆ.







