ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಏತನ್ಮಧ್ಯೆ ಬಾವಿಗೆ ತಂದೆಯೂ ಜಿಗಿದಿದ್ದಾನೆ ಎಂದು ಹೇಳಲಾಗಿದ್ದು ಆತನ ಶವ ಶೋಧಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹಗಲಿರಳು ಕಾರ್ಯಾಚರಣೆ ನಡೆಸಿದ್ದರೂ ಆತನ ಶವ ಪತ್ತೆಯಾಗಿಲ್ಲ.
ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕಿಯರನ್ನು ಹಿರಿಯ ಸಹೋದರಿ ರಕ್ಷಿತಾ ಬರಗಿ(15) ಹಾಗೂ ಕಿರಿಯ ಸಹೋದರಿ ಸಾಕ್ಷಿ ಬರಗಿ(10) ಎಂದು ಗುರುತಿಸಲಾಗಿದೆ. ಬಾವಿಯಲ್ಲಿದ್ದ ಎಲ್ಲ ನೀರು ಖಾಲಿ ಮಾಡಿಸಿದ್ದರೂ ತಂದೆ ಸಾಬಣ್ಣ ಮಾತ್ರೆ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇವರ ತಂದೆ ಸಾಬಣ್ಣ ಬರಗಿ ಹೆಣ್ಣು ಮಕ್ಕಳನ್ನು ಬಾವಿಗೆ ದೂಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೋ ಅಥವಾ ಜೀವ ಭಯದಿಂದ ಬಾವಿಯಿಂದ ಮೇಲೆ ಬಂದಿದ್ದಾನೋ ಎಂಬುದು ಗೊತ್ತಾಗಿಲ್ಲ. ಸಾಬಣ್ಣಗೆ ನಾಲ್ವರು ಹೆಣ್ಣುಮಕ್ಕಳಿದ್ದು ಅದರಲ್ಲಿ ಇಬ್ಬರು ಬಾವಿಯಲ್ಲಿ ಮೃತಪಟ್ಟಿರುವುದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ ನೇತೃತ್ವದಲ್ಲಿ ಸಿಬ್ಬಂದಿ ಸುಭಾಷ ರಾಠೋಡ,ತಮ್ಮಣ್ಣ ಗೌಡರ,ವಿರೂಪಾಕ್ಷ ಪೂಜಾರಿ,ಶ್ರೀಶೈಲಗೌಡ ಪಾಟೀಲ,ರಾಜು ರಾಠೋಡ,ಲಕ್ಷ್ಮಣ ಕರ್ನಾಲಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಂದೆಯ ಹುಡುಕಾಟಕ್ಕೆ ಪೊಲೀಸರು,ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಘಟನೆಗೆ ನಿಖರ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







