ಮುದ್ದೇಬಿಹಾಳ : ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಯೊoದು ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಇತಿಹಾಸ ನಿರ್ಮಿಸಿದೆ. ತಾಲ್ಲೂಕಿನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯು ಸನ್ 2025-26ನೇ ಸಾಲಿನಲ್ಲಿ ಒಂದೇ ಶಾಖೆಯಿಂದ ಬರೊಬ್ಬರಿ 225 ವೈದ್ಯಕೀಯ (ಮೆಡಿಕಲ್) ಸೀಟುಗಳು ಪಡೆದುಕೊಳ್ಳುವ ಮೂಲಕ ಇಡೀ ರಾಜ್ಯಕ್ಕೆ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸoಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು. 225 ಮೆಡಿಕಲ್ ಸೀಟುಗಳಲ್ಲಿ 160ಕ್ಕೂ ಹೆಚ್ಚು ರೈತರ ಮಕ್ಕಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದುಕೊಂಡಿದ್ದು ರೈತರ ಕುಟುಂಬಗಳ ಬದುಕು ಭವಿಷ್ಯದಲ್ಲಿ ಬದಲಾಗಲಿದೆ ಎಂದು ಹೇಳಿದರು.
ಸಿಇಟಿ , ನೀಟ್ ಹಾಗೂ ಜೆಇಇ ಫೌಂಡೇಶನ್ ತರಬೇತಿಯಲ್ಲಿ ಸಂಸ್ಥೆ ತೋರಿದ ವಿಶೇಷ ಗಮನವೇ ಈ ಬೃಹತ್ ಯಶಸ್ಸಿಗೆ ಕಾರಣವಾಗಿದೆ. ಈ ಬಾರಿ ಸಾಧನೆ ಮಾಡಿದವರಲ್ಲಿ 160ಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರ ಮಕ್ಕಳಿದ್ದಾರೆ ಎಂಬುದು ವಿಶೇಷ. ಬಡ ಹಾಗೂ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯದ ಪ್ರತಿಷ್ಠಿತ ಏಮ್ಸ್ , ಬೆಂಗಳೂರಿನ ಬಿಎಮ್ಸಿ, ಮೈಸೂರು, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಬೆಳಗಾವಿ, ಬಳ್ಳಾರಿ, ಗದಗ, ರಾಯಚೂರು,ಬೀದರ್, ಕಲಬುರಗಿ, ಕಾರವಾರ, ಕೊಪ್ಪಳ ಹಾಗೂ ಹಾವೇರಿಯ ವೈದ್ಯಕೀಯ ಕಾಲೇಜುಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಈಗ ಆಯ್ಕೆಯಾಗಿರುವ ಬಹುತೇಕ ವಿದ್ಯಾರ್ಥಿಗಳು 2 ರಿಂದ 3 ವರ್ಷಗಳ ಕಾಲ ಸಂಸ್ಥೆಯಲ್ಲಿ ಉಚಿತವಾಗಿ ವ್ಯಾಸಂಗ ಮಾಡಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಸಂಸ್ಥೆಯ ವತಿಯಿಂದ ₹40 ರಿಂದ ₹50 ಸಾವಿರದವರೆಗೆ ಉಚಿತ ಸಹಾಯಧನವನ್ನೂ ಒದಗಿಸಲಾಗಿದೆ ಎಂದು ಹೇಳಿದರು.
ಸಾಧನೆಯ ಹಾದಿ: ಕಳೆದ ಆರು ವರ್ಷಗಳಲ್ಲಿ ಸಂಸ್ಥೆಯಲ್ಲಿ ಓದಿದ 1450 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಸೀಟುಗಳನ್ನು ಪಡೆದುಕೊಂಡಿರುವುದು ಹೆಗ್ಗಳಿಕೆಯಾಗಿದೆ.ಈ ವರ್ಷದ ಫಲಿತಾಂಶದಲ್ಲಿ ಬಿ.ಎ.ಎಮ್.ಎಸ್ ಸೀಟುಗಳು 240ಕ್ಕೂ ಅಧಿಕವಾಗಿದ್ದು ಪಶುವೈದ್ಯಕೀಯ (ವೆಟರ್ನರಿ) ಸೀಟುಗಳು 60-70 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಆರಂಭಿಸಿರುವ ಶಾಖೆಯಿಂದ ಮುಂದಿನ ವರ್ಷದಲ್ಲಿ ಒಟ್ಟು 25-30 ಮೆಡಿಕಲ್ ಸೀಟುಗಳನ್ನು ಕೊಡುವ ಗುರಿ ಹೊಂದಿದ್ದೇವೆ.2027ರಲ್ಲಿ ನಮ್ಮ ಕಾಲೇಜಿನಿಂದ 250ಕ್ಕೂ ಅಧಿಕ ವಿದ್ಯಾರ್ಥಿಗಳು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು. ಸಂಸ್ಥೆಯ ಸಾಧನೆಗೆ ಕೆಲವರು ವಿನಾಕಾರಣ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿರುತ್ತಾರೆ.ಆದರೆ ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸಂಸ್ಥೆಯ ಥಿಯರಿ, ನೀಟ್ ಹಾಗೂ ಜೆಇಇ ಪರೀಕ್ಷಾ ಫಲಿತಾಂಶಗಳ ಕುರಿತು ಕೆಲವರು ಅಪಪ್ರಚಾರ ಮತ್ತು ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾವುದೇ ರಿಸಲ್ಟ್ ಬಂದರೂ ತಪ್ಪು ಕಲ್ಪನೆ ಮೂಡಿಸುವ ಕೆಲಸ ನಡೆಯುತ್ತಿದೆ. ಆದರೆ, ನಮ್ಮ ವಿದ್ಯಾರ್ಥಿಗಳು ಗಳಿಸಿದ ಈ ಅಭೂತಪೂರ್ವ ಸೀಟುಗಳ ಸಂಖ್ಯೆಯೇ ಅಂತಹ ಎಲ್ಲ ಟೀಕೆಗಳಿಗೆ ತಕ್ಕ ಉತ್ತರ ನೀಡಿದೆ ಎಂದು ಆಡಳಿತಾಧಿಕಾರಿ ಪಾಟೀಲ್ ಉತ್ತರಿಸಿದರು.
ಪ್ರಾಚಾರ್ಯ ರೇವಣಸಿದ್ದ ಚಲವಾದಿ(ಮುರಾಳ) ಮಾತನಾಡಿ, ನಾಗರಬೆಟ್ಟದಲ್ಲಿ ಸಂಸ್ಥೆಯಿoದ ನೀಡಲಾಗುತ್ತಿರುವ ಅತ್ಯುತ್ತಮ ಶಿಕ್ಷಣವೇ ಇಂದಿನ ಸಾಧನೆಗೆ ಕಾರಣವಾಗಿದೆ.ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರ ಮಾರ್ಗದರ್ಶನದಿಂದ ಇಷ್ಟೊಂದು ವಿದ್ಯಾರ್ಥಿಗಳು ಮೆಡಿಕಲ್ ಸೀಟುಗಳನ್ನು ಗಳಿಸುವುದಕ್ಕೆ ಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಯನ್ನು ಕಾಲೇಜಿನಿಂದ ಮಾಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಸಿ.ಬಿ.ದೇಸಾಯಿ,ಉಪನ್ಯಾಸಕ ವಿನಯ್ ಪಾಟೀಲ ಉಪಸ್ಥಿತರಿದ್ದರು.
ಯಾವ ಕಾಲೇಜು,ಎಷ್ಟು ಸೀಟು : ಏಮ್ಸ್-3,ಎಂಎoಸಿ-6,ಬೀಮ್ಸ್-32,ಜಿಮ್ಸ್(ಗದಗ)-12,ಜೀಮ್ಸ್(ಗುಲಬರ್ಗಾ)-10,ಕ್ರಿಮ್ಸ್-10,ಹಿಮ್ಸ್-8,ಯೀಮ್ಸ್-7,ಬಿಎoಸಿ-14,ಕೀಮ್ಸ್-19,ವಿಮ್ಸ್-15,ರಿಮ್ಸ್-8,ಕೊಪ್ಪಳ ಕಿಮ್-10,ಬೀದರ-ಬೀಮ್ಸ್-11,ಎಸ್.ಎನ್.ಎಂ.ಸಿ-12 ಸೀಟು ಪಡೆದುಕೊಂಡಿದ್ದಾರೆ.







