ಮುದ್ದೇಬಿಹಾಳ : ರಾಜ್ಯ ಸರ್ಕಾರ ಬರ ಪರಿಹಾರದ ಹಣವಾಗಿ 2500 ರೂ.ನೀಡಲು ಮುಂದಾಗಿರುವ ಕ್ರಮವನ್ನು ಖಂಡಿಸಿದ ಇಲ್ಲಿನ ಬಿಜೆಪಿ ಕಾರ್ಯಕರ್ತರು,ಮುಖಂಡರು ಎಪಿಎಂಸಿಯ ವಿವಿಧ ಅಡತ್ ಅಂಗಡಿಗಳಲ್ಲಿ ಕೂಲಿ ಮಾಡಿ ಅದರಿಂದ ಬಂದ ಹಣವನ್ನು ಸರ್ಕಾರದ ಪ್ರತಿಕೃತಿಗೆ ಹಾರ ಮಾಡಿ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಏಪಿಎಂಸಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ(ಕವಡಿಮಟ್ಟಿ), ರೈತರು ಹಾಗೂ ಬಿಜೆಪಿ ಪಕ್ಷದ ಹೋರಾಟದ ಫಲವಾಗಿ ಬರ ಘೋಷಣೆ ಆಯಿತು.ಸಂಕಷ್ಟದಲ್ಲಿರುವ ರೈತರಿಗೆ ಸರಕಾರ ನೆರವಿಗೆ ಬರುತ್ತದೆ.ಸೂಕ್ತ ನ್ಯಾಯಸಮ್ಮತ ಪರಿಹಾರ ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ ರೈತರ ಖಾತೆಗೆ ಸಿಎಂ ಡಿಕೆ ಶಿವಕುಮಾರ್ 2500 ಘೋಷಣೆ ಮಾಡಿದ್ದು ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿಯ ಅಡತಿಗಳಲ್ಲಿ ರೈತರು ಕೂಲಿ ಮಾಡಿ ಸಂಗ್ರಹಿಸಿದ ಮೂರು ಸಾವಿರ ರೂಪಾಯಿಗಳನ್ನು ಪೋಸ್ಟ್ ಮೂಲಕ ಮರಳಿ ಸರ್ಕಾರಕ್ಕೆ ನೀಡುತ್ತಿದ್ದೇವೆ.ಅಧಿವೇಶನದಲ್ಲಿ ಶಾಸಕರೊಬ್ಬರ ಒಂದು ಊಟದ ಖರ್ಚು 2500. ಆದರೆ ರೈತರ ಖಾತಗೆ ಪುಡಿಗಾಸು ನೀಡಿ ಅವಮಾನಿಸಿದೆ.ಸಿಎಂಗೆ ರೈತರು ಎಷ್ಟು ಸಂಕಷ್ಟದಲ್ಲಿದ್ದಾರೆ, ಯಾವೆಲ್ಲ ಬೆಳೆ ಕಳೆದುಕೊಂಡು ನಷ್ಟ ಅನುಭವಸಿದ್ದಾರೆ ಎಂಬ ಮಾಹಿತಿ ಇಲ್ಲದಿರುವುದು ದುರಂತದ ಸಂಗತಿ ಎಂದು ಹರಿಹಾಯ್ದರು.
ಸೂರ್ಯಕಾಂತಿ, ತೊಗರಿ ಸೇರಿದಂತೆ ಅನೇಕ ಧಾನ್ಯಗಳನ್ನು ಚೀಲಕ್ಕೆ ತುಂಬಿದ ಬಿಜೆಪಿ ಕಾರ್ಯಕರ್ತರು,ಕೆಲವು ಕೂಲಿ ಕಾರ್ಮಿಕರು ದುಡಿದು ಬಂದ ಹಣದಿಂದ ಸರ್ಕಾರದ ಪ್ರತಿಕೃತಿಗೆ ನೋಟಿನ ಹಾರ ಹಾಕಿ ಸರಕಾರಕ್ಕೆ ಧಿಕ್ಕಾರ ಕೂಗಿದರು. ರೈತರ ಪಾಲಿಗೆ ಸರಕಾರ ಸತ್ತಿದೆ ಎಂದು ಕಣ್ಣೀರು ಹಾಕಿ ಬೊಬ್ಬೆ ಹಾಕಿದರು.
ಜಿಪಂ ಮಾಜಿ ಅಧ್ಯಕ್ಷ ಗಂಗಾಧರರಾವ್ ನಾಡಗೌಡ, ಶಿವು ಕನ್ನೊಳ್ಳಿ, ಗುರುನಾಥಗೌಡ ಬಿರಾದಾರ, ಸಂಗಮ್ಮ ದೇವರಳ್ಳಿ, ಮಲ್ಲಣ್ಣ ತಂಗಡಗಿ,ಸಿದ್ಧರಾಜ ಹೊಳಿ,ಹರೀಶ ನಾಟೀಕಾರ ಮತ್ತಿತರರು ಮಾತನಾಡಿ, ಮುದ್ದೇಬಿಹಾಳ ತಾಳಿಕೋಟಿ ಬರ ತಾಲೂಕು ಘೋಷಣೆ ಸೇರಿದಂತೆ ಸಮಗ್ರ ವಿಜಯಪುರ ಜಿಲ್ಲೆ ಬರ ಘೋಷಣೆ ಆಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಶೈಲ್ ದೂಡಮನಿ, ರವೀಂದ್ರ ಬಿರಾದಾರ, ಸುಭಾಷ್ ಕಟ್ಟಿಮನಿ, ಸಂಗಣ್ಣ ಹತ್ತಿ, ಸಂತೋಷ ಬಾದರಬಂಡಿ,ಮಲ್ಲಯ್ಯ ಚೂಂಡಿ, ಶಂಕರಗೌಡ ಶಿವಣಗಿ,ರಮೇಶ ಢವಳಗಿ,ಚನ್ನಬಸ್ಸು ಮಂಗ್ಯಾಳ,ಗೌರಮ್ಮ ಹುನಗುಂದ,ನರಸಮ್ಮ ಗುಬಚಿ, ಗಿರೀಶಗೌಡ ಪಾಟೀಲ್ ಮುರಾಳ,ನಾಗೇಶ ಕವಡಿಮಟ್ಟಿ,ಬಸಲಿಂಗಮ್ಮ ಪಾಟೀಲ್,ನಿಖಿಲ್ ಮಲಗಲದಿನ್ನಿ,ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಪಿಎಸೈ ವಿಜಯಕುಮಾರ್ ತಳವಾರ ಸೂಕ್ತ ಬಿಗಿ ಬಂದೋಬಸ್ತ್ ವಹಿಸಿದ್ದರು.







