ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ ಪತ್ತೆಗೊಂಡು ನಾಲ್ಕು ತಿಂಗಳ ಬಳಿಕ ಮರಳಿ ತಮ್ಮೂರಿಗೆ ಆಗಮಿಸಿದ ಪವಾಡ ಬಸವೇಶ್ವರ ದೇವರ ನೂತನ ಮೂರ್ತಿಯನ್ನು ಕಂಡ ಗ್ರಾಮಸ್ಥರು,ಭಕ್ತರು ಆನಂದಪರವಶರಾಗಿ ಜೈಕಾರ ಹಾಕಿದರು.
ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಶನಿವಾರ ವಿಜಯಪುರದಿಂದ ನಿಡಗುಂದಿ-ಮುದ್ದೇಬಿಹಾಳ ಮಾರ್ಗವಾಗಿ ಬಸರಕೋಡದ ಸರಕಾರಿ ಪಿಯು ಕಾಲೇಜಿಗೆ ಪೊಲೀಸರ ಭದ್ರತೆಯಲ್ಲಿ ಕರೆತಂದಾಗ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಊರಿನ ಹೊರಗ ವಲಯದಲ್ಲಿರುವ ಕಾಲೇಜಿನ ಆವರಣದಿಂದ ದೇವಸ್ಥಾನದವರೆಗೆ ಸಾವಿರಾರು ಕುಂಭ ಕಲಶಳನ್ನು ಹೊತ್ತಿದ್ದ ಮಹಿಳೆಯರು ವಿವಿಧ ಕಲಾತಂಡದವರು,ಕುದುರೆ ಕುಣಿತ,ಬೊಂಬೆ ಕುಣಿತದ ತಂಡದವರು,ಜೋಗತಿ ತಂಡದವರ ನೃತ್ಯದೊಂದಿಗೆ ಮೆರವಣಿಗೆ ಸಾಗಿತು.ದೇವಸ್ಥಾನ ಕಮಿಟಿ ಸದಸ್ಯ ಶ್ರೀಶೈಲ ಮೇಟಿ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಯನ್ನು ವಿಜಯಪುರದಿಂದ ಕಾರಿನಲ್ಲಿ ಸಾಧು,ಸಂತರ ನೇತೃತ್ವದಲ್ಲಿ ಬಸರಕೋಡಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನ ಕಮಿಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ, ನಮ್ಮೂರಿನ ದೈವ ಕಳ್ಳತನವಾದಾಗ ಭಕ್ತರೆಲ್ಲರೂ ನೊಂದಿದ್ದರು.ಆದರೆ ಪೊಲೀಸ್ ಇಲಾಖೆಯವರು ಆ ಪ್ರಕರಣವನ್ನು ಬೇಧಿಸಿ ಕಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ.ಅದರಿಂದ ಇಂದು ಭಕ್ತರ ಸಹಯೋಗದಲ್ಲಿ ಹೊಸ ಮೂರ್ತಿಯನ್ನು ಗ್ರಾಮದಲ್ಲಿ ವೈಭವದಿಂದ ಮೆರವಣಿಗೆ ನಡೆಸಲಾಗಿದೆ ಎಂದರು.
ದೇವಸ್ಥಾನ ಸಮೀತಿ ಸದಸ್ಯ ಶ್ರೀಶೈಲ ಮೇಟಿ ಮಾತನಾಡಿ, ದೈವವನ್ನು ಕಳೆದುಕೊಂಡು ಬಡವಾಗಿದ್ದ ಬಸರಕೋಡಕ್ಕೆ ಮತ್ತೆ ಜೀವಕಳೆಯನ್ನು ನೂತನ ಮೂರ್ತಿ ಗ್ರಾಮಕ್ಕೆ ಪ್ರವೇಶಿಸುವ ಮೂಲಕ ಭಕ್ತರ ಸಂತಸಕ್ಕೆ ಕಾರಣವಾಗಿದೆ.ನ.24ರಂದು ಅದ್ದೂರಿಯಾಗಿ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ದೇವಸ್ಥಾನ ಕಮೀಟಿ ಪ್ರಮುಖರಾದ ಎಸ್.ಬಿ.ನಾಡಗೌಡರ,ಎಂ.ಆರ್.ನಾಡಗೌಡರ,ನೀಲಕOಠರಾವ ನಾಡಗೌಡರ,ಕೆ.ಎಸ್.ಕೊಟಗಿ,ಸಂಗಣ್ಣ ಚಿನಿವಾರ(ಪಾಪಡಿ),ಬಸವರಾಜ ಚಿತ್ತರಗಿ,ಬಸಪ್ಪ ಬೈಲಗೊಂಡ,ಶರಣಗೌಡ ಹಂಡರಗಲ್,ಪರ್ವತಯ್ಯಾ ಸಾಲಿಮಠ,ಮದನಸ್ವಾಮಿ ಹಿರೇಮಠ,ನಾಗರಾಜ ತಂಗಡಗಿ ಸೇರಿದಂತೆ ಹಲವರು ಇದ್ದರು.
ನಾಡಗೌಡರ ಕುಟುಂಬದಿOದ ಪುಷ್ಪವೃಷ್ಟಿ: ಮುದ್ದೇಬಿಹಾಳದಿಂದ ಆಗಮಿಸಿದ ನೂತನ ಪವಾಡ ಬಸವೇಶ್ವರರ ಮೂರ್ತಿಯನ್ನು ಮುದ್ದೇಬಿಹಾಳ-ವಿಜಯಪುರ ರಸ್ತೆಯ ಬಸರಕೋಡ ಕ್ರಾಸನಲ್ಲಿ ನಾಡಗೌಡರ ಮನೆತನದವರು ಮಹಾದ್ವಾರದ ಮೇಲಿಂದ ಪುಷ್ಪವೃಷ್ಟಿಗೈಯ್ಯುವ ಮೂಲಕ ಸ್ವಾಗತಿಸಿದರು.ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ನಾಡಗೌಡ,ನೀಲಕಂಠರಾವ ನಾಡಗೌಡ ಸೇರಿದಂತೆ ಹಲವರು ಇದ್ದರು.
ಪೊಲೀಸರಿಂದಲೂ ಗೌರವ :
ಮುದ್ದೇಬಿಹಾಳ ಪಟ್ಟಣದ ಪೊಲೀಸ್ ಠಾಣೆ ಮುಂದೆ ಪವಾಡ ಬಸವೇಶ್ವರ ಮೂರ್ತಿ ಹೊತ್ತಿದ್ದ ಕಾರು ಬರುತ್ತಿದ್ದಂತೆ ಸಿಪಿಐ ಮೊಹ್ಮದಫಸಿವುದ್ದೀನ,ಪಿಎಸ್‌ಐ ವಿಜಯಕುಮಾರ ತಳವಾರ ಹಾಗೂ ಪೊಲೀಸರು ಕಾರಿಗೆ ಪೂಜೆ ಸಲ್ಲಿಸಿ ಮೂರ್ತಿಯನ್ನು ಬಸರಕೋಡಕ್ಕೆ ಬೀಳ್ಕೊಟ್ಟರು.







