ಮುದ್ದೇಬಿಹಾಳ : ವಿಜಯಪುರ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕುಗಳಲ್ಲಿ ಬರದ ಛಾಯೆ ಗಾಢವಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದ್ದು ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಪತ್ರ ಬರೆದಿದ್ದಾರೆ.
ಬರದ ಪರಿಸ್ಥಿತಿಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವರೂ ಆಗಿರುವ ವಿಜಯಾನಂದ ಕಾಶಪ್ಪನವರ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಜಿಮ್ಮಲಗಿ ಏತ ನೀರಾವರಿ ಹಂತ-3 ರ ಅಡಿಯಲ್ಲಿ ಬರುವ ಎಲ್ಲಾ ಕಾಲುವೆಗಳಿಗೆ ಆಲಮಟ್ಟಿ ಜಲಾಶಯದಿಂದ ಕೂಡಲೇ ನೀರು ಹರಿಸಬೇಕು. ಇದರಿಂದ ಎರಡೂ ತಾಲೂಕುಗಳ ಕೆರೆಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಚಿವರು ಈ ಕುರಿತು ಶೀಘ್ರವಾಗಿ ಸ್ಪಂದಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುತ್ತಾರೆ ಎಂದು ನಂಬಿದ್ದೇನೆ ಎಂದು ಶಾಸಕ ಅಪ್ಪಾಜಿ ನಾಡಗೌಡ ತಿಳಿಸಿದ್ದಾರೆ.ಕ್ಷೇತ್ರದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ನಮ್ಮ ಮೊದಲ ಆದ್ಯತೆ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.







