ಮುದ್ದೇಬಿಹಾಳ : ವಿದ್ಯುತ್ ಶಾಟ್ ಸರ್ಕಿಟ್ನಿಂದಾಗಿ ಹನ್ನೆರಡು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ವಣಕಿಹಾಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ವಣಕಿಹಾಳ ಗ್ರಾಮದ ಶಾಂತಗೌಡ ಬಿರಾದಾರಗೆ ಸೇರಿದ 3.32 ಎಕರೆ,ಗೀತಾ ಬಿರಾದಾರಗೆ ಸೇರಿದ 2.02 ಎಕರೆ , ಶಿವನಗೌಡ ಬಿರಾದಾರಗೆ ಸೇರಿದ 4 ಎಕರೆ,ನಾಗಪ್ಪ ಹುಮನಾಬಾದ ಅವರಿಗೆ ಸೇರಿದ 5.10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.
ಕಬ್ಬಿನ ಬೆಳೆಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ರೈತರು ಮುದ್ದೇಬಿಹಾಳ ಹಾಗೂ ತಾಳಿಕೋಟಿ ಅಗ್ನಿಶಾಮಕ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ.ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯ ಎರಡೂ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು.ಅಂದಾಜು 30 ಲಕ್ಷ ರೂ.,ಗಳಿಗಿಂತಲೂ ಹೆಚ್ಚು ನಷ್ಟ ರೈತರಿಗೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಕಬ್ಬಿಗೆ ಬೆಂಕಿ ತಗುಲಿದ ಸುದ್ದಿ ತಿಳಿದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಕಿ ನಂದಿಸಲು ಶ್ರಮದಾನ ಮಾಡಿದರು.ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ,ಸಿಬ್ಬಂದಿ ಜಾಕೀರಹುಸೇನ್ ನಾಲತವಾಡ,ಶಿವಾನಂದ ಭೋವಿ,ಲಕ್ಷ್ಮಣ ಕರ್ನಾಲಗಿ,ಶ್ರೀಶೈಲಗೌಡ ಪಾಟೀಲ,ಕಾರ್ತಿಕ ಅಜಮನಿ,ಮಹಾಂತಪ್ಪ ಬಿರಾದಾರ ,ವೀರೇಶ್ ಹಂಡರಗಲ್,ಶ್ರೀನಿವಾಸ ಚವ್ಹಾಣ,ದೇವೇಂದ್ರ ರಾಥೋಡ ಮತ್ತಿತರರು ಶ್ರಮಿಸಿದರು.







