ಮುದ್ದೇಬಿಹಾಳ : ಗಡಿಯಲ್ಲಿ ಸೇವೆ ಸಲ್ಲಿಸುವ ಸೇವೆ ಪುರುಷರಿಗಷ್ಟೇ ಸೀಮಿತವಾಗಿದ್ದ ಕಾಲಘಟ್ಟ ಬದಲಾಗಿದ್ದು ಇದೀಗ ಮಹಿಳೆಯರು ದೇಶದ ಗಡಿಯಲ್ಲಿ ನಿಂತು ಹೋರಾಟ ನಡೆಸಲು ಸನ್ನದ್ದರು ಎಂಬುದಕ್ಕೆ ಬಿಎಸ್‌ಎಫ್‌ಗೆ ಆಯ್ಕೆಯಾಗಿರುವ ಸಹೋದರಿ ಆಯೇಷಾ ವಾಲೀಕಾರ ಅವರ ಸಾಧನೆಯೇ ನಿದರ್ಶನ ಎಂದು ಕಿಲ್ಲಾ ಹೊಸಮಠದ ಅಮರೇಶ್ವರ ದೇವರು ಹೇಳಿದರು.
ಬಿ.ಎಸ್.ಎಫ್‌ಗೆ ಆಯ್ಕೆಯಾಗಿರುವ ತಾಲ್ಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಅವರಿಗೆ ಪಟ್ಟಣದ ಸೈನಿಕ ಮೈದಾನದಲ್ಲಿ ಗುರುವಾರ ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ಹಿರಿಯ ಸದಸ್ಯ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಹಿಂದಿನ ಕಾಲದಲ್ಲಿ ಸೇನೆಯಲ್ಲಿ ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದು ಝಾನ್ಸಿರಾಣಿ ಲಕ್ಷ್ಮೀಬಾಯಿ. ಅದೇ ರೀತಿ ಮುದ್ದೇಬಿಹಾಳ ತಾಲ್ಲೂಕಿನ ಪ್ರಥಮ ಮಹಿಳೆಯಾಗಿ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿರುವ ಆಯೇಷಾ ವಾಲೀಕಾರ ಸಾಧನೆ ನಮಗೆಲ್ಲ ಮಾದರಿಯಾಗಿದೆ.ಕಾರ್ಗಿಲ್ ಸ್ಮಾರಕದ ಮೈದಾನದಲ್ಲಿ ಹುತಾತ್ಮರಾದವರು,ಸೇವೆ ಮುಗಿಸಿಕೊಂಡು ವಾಪಸ್ ಆದವರನ್ನು ಗೌರವಿಸುವ ಸಂಪ್ರದಾಯದ ಜೊತೆಗೆ ಈಗ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿರುವ ಮಹಿಳೆಯನ್ನು ಗೌರವಿಸುವ ಸಂಪ್ರದಾಯ ಆರಂಭವಾಗಿರುವುದು ಖುಷಿಯ ಸಂಗತಿ ಎಂದರು.
ಎಎಸ್‌ಐ ಕೆ.ಎಸ್.ಅಸ್ಕಿ ಮಾತನಾಡಿ, ನಮ್ಮೂರಿನ ಯುವತಿಯೊಬ್ಬಳು ಇಡೀ ಜಿಲ್ಲೆಯೇ ಮೆಚ್ಚುವ ಸಾಧನೆ ತೋರಿರುವುದು ಖುಷಿಯ ಸಂಗತಿ.ಬಡತನವನ್ನು ಮೆಟ್ಟಿ ನಿಂತು ಸೇನೆಗೆ ಸೇರಿರುವುದು ಸಣ್ಣ ಮಾತಲ್ಲ.ಅವರಿಗೆ ಇಲಾಖೆಯಿಂದ ಅಭಿನಂದಿಸುವೆ ಎಂದರು.
ಬಿಎಸ್‌ಎಫ್‌ಗೆ ಆಯ್ಕೆಯಾಗಿರುವ ಆಯೇಷಾ ವಾಲೀಕಾರ ಮಾತನಾಡಿ, ಈ ಸಾಧನೆ,ಮೆರವಣಿಗೆ ನನ್ನ ತಂದೆ,ತಾಯಿ ಹಾಗೂ ಸಹೋದರನಿಗೆ ಸಲ್ಲಬೇಕು.ಬಡತನಕ್ಕೆ ಈ ಗೌರವ ದೊರೆಯುತ್ತಿದೆ.ಬಡತನ ಇದೆ ಎಂದು ದೊಡ್ಡ ಕನಸು ಕಾಣುವುದನ್ನು ಬಿಡಬೇಡಿ.ಉನ್ನತ ಕನಸುಗಳನ್ನಿಟ್ಟು ಕಷ್ಟಪಟ್ಟು ಓದಿ ನಿಶ್ಚಿತವಾಗಿಯೂ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.
ಆಯೇಷಾ ಅವರ ತಂದೆ ಬಂದಗೀಸಾ ವಾಲೀಕಾರ, ತಾಯಿ ಶಾಕೀರಾ ವಾಲೀಕಾರ ಅವರನ್ನು ಸಮೀತಿಯ ಪದಾಧಿಕಾರಿಗಳು ತವರಿನ ಗೌರವದ ಸಂಕೇತವಾಗಿ ಸೀರೆ,ಬಳೆ,ಹೂವು ನೀಡಿ ಸನ್ಮಾನಿಸಿ ಅಭಿನಂದಿಸಿದರು.ನಿವೃತ್ತ ಸೈನಿಕ ಚಿದಾನಂದ ಬಿರಾದಾರ,ಮಾಜಿ ಸೈನಿಕ ಸೋಮಶೇಖರ ಚಿರಲದಿನ್ನಿ,ಸಮೀತಿಯ ಅಧ್ಯಕ್ಷ ಶ್ರೀಕಾಂತ ಹಿರೇಮಠ ಇದ್ದರು.ಚಂದ್ರಶೇಖರ ಕಲಾಲ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ,ಅಮಾನತ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ, ನದಾಫ-ಪಿಂಜಾರ್ ಸೇವಾ
ಸಂಘ,ಗoಗಾಮಾತಾ ಪತ್ತಿನ ಸಹಕಾರಿ ಸಂಘ ಹಾಗೂ ಮುಖಂಡರು,ಗಣ್ಯರು ಸನ್ಮಾನಿಸಲಾಯಿತು.
ಕಾರ್ಗಿಲ್ ವೀರಯೋಧರ ಸ್ಮಾರಕ ಸಮೀತಿ ಪದಾಧಿಕಾರಿಗಳು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಇದ್ದರು.
ಪಟ್ಟಣದ ಬಜಾರ್ ಹನುಮಾನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ತೆರೆದ ಜೀಪಿನಲ್ಲಿ ಆಯೇಷಾ ವಾಲೀಕಾರ ಅವರನ್ನು ಮೆರವಣಿಗೆ ನಡೆಸಲಾಯಿತು.



