ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ಶ್ರೀ ಶರಣ ವೀರೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಸಚಿವರಾದ ದಿ.ಜೆ.ಎಸ್.ದೇಶಮುಖ ಅವರ 36ನೇ ಹಾಗೂ ಮಾಜಿ ಸಚಿವೆ ದಿ.ವಿಮಲಾಬಾಯಿ ದೇಶಮುಖ ಅವರ ಎಂಟನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಮುಖರು ಸಾವಿರಾರು ಎಕರೆ ಜಮೀನು, ನೂರಾರು ಮನೆಗಳನ್ನು ಬಡವರಿಗೆ ದಾನ ಮಾಡಿದರೂ ಅವರಿಂದ ನಯಾಪೈಸೆ ಪಡೆಯಲಿಲ್ಲ.ಇಂತಹ ರಾಜಕಾರಣಿಗಳು ಅಪರೂಪ.ಅವರ ದೇಹ ಅಗಲಿದರೂ ಅವರು ಮಾಡಿದ ಸಾಧನೆಗಳು ಅಜರಾಮವಾಗಿವೆ.ದೇಶಮುಖ ಅವರು ಈ ನಾಡು ಕಂಡ ಶುದ್ಧ ಹಸ್ತದ ರಾಜಕಾರಣಿ ಎಂದರು.
ಮಾಜಿ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ದೇಶಮುಖರು ಎಂದಿಗೂ ಜಾತಿ ಭೇದವನ್ನು ಮಾಡಿದವರಲ್ಲ, ಮುರಾರ್ಜಿ ದೇಸಾಯಿ ಸೇರಿದಂತೆ ರಾಮಕೃಷ್ಣ ಹೆಗಡೆಯವರ ಒಡನಾಡಿಯಾಗಿ ಕೆಲಸ ಮಾಡಿದ್ದ ದೇಶಮುಖರಿಗೆ ನಾನು ದೇಶಮುಖ ಎನ್ನುವ ಎಂದಿಗೂ ಭಾವನೆ ಇರಲಿಲ್ಲ ಎಂದರು.
ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ದೇಶಮುಖ ಅವರು ಅಗಲಿಲ್ಲ, ಅವರು ಇನ್ನೂ ಸಾಧನೆಗಳ ಮೂಲಕ ಜೀವಂತ ಇದ್ದಾರೆ. ಯಾವ ವ್ಯಕ್ತಿ ಸಮಾಜದಲ್ಲಿ ವಿಭಿನ್ನವಾಗಿ ಬದುಕುತ್ತಾನೋ ಅವರು ಎಂದಿಗೂ ಅಗಲಿಲ್ಲ.ದೇಶಮುಖರು ತಮ್ಮ ಬದುಕಿಗೆ ಬಡಿದಾಡಲಿಲ್ಲ.ಇಬ್ಬರೂ ದಂಪತಿಗಳು ಭೌತಿಕವಾಗಿ ಇಲ್ಲದಿದ್ದರೂ ಸಾಧನೆಗಳಲ್ಲಿ ಜೀವಂತವಾಗಿದ್ದಾರೆ ಎಂದರು.
ಇಲಕಲ್ನ ಚಿತ್ತರಗಿ ಸಂಸ್ಥಾನ ಮಠದ ಗುರು ಮಹಾಂತಸ್ವಾಮೀಜಿ ಆಶೀರ್ವಚನ ನೀಡಿದರು.ಶರಣ ವೀರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ, ಎಂ.ಬಿ.ಅoಗಡಿ (ಮುತ್ತುಸಾಹುಕಾರ), ಸಂಗಮೇಶ ಮೇಟಿ, ಸಿ.ಎಸ್.ಬಿರಾದಾರ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಪಾರಿತೋಷಕ ಸೇರಿ ಐಟಿಐ, ಪ್ರೌಢ, ಪದವಿ ಸೇರಿದಂತೆ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ವೀರೇಶ ವಾಲಿ ಸಂಗಡಿಗರಿoದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.
ಶಿರೂರಿನ ಬಸವರಾಜ ಮಹಾಸ್ವಾಮೀಗಳು, ಚವನಬಾವಿಯ ಶರಣಮ್ಮ ಅಮ್ಮನವರು, ಮುಖಂಡ ಶಂಕರರಾವ್ ದೇಶಮುಖ, ಗುರುಪ್ರಸಾದ್ ದೇಶಮುಖ, ಬಿಜೆಪಿ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ಬಿ.ನಾವದಗಿ, ಉದ್ಯಮಿ ಸತೀಶ ಓಸ್ವಾಲ್, ಈರಣ್ಣ ತಡಸದ, ಬಿ.ಕೆ.ಬಿರಾದಾರ ಇದ್ದರು. ಶಿಕ್ಷಕರಾದ ರಾಜು ಹಾದಿಮನಿ ಹಾಗೂ ಮಹಾನಂದಾ ಅಮ್ಮಾಜಿಗೋಳ ನಿರೂಪಿಸಿದರು.







