ಮುದ್ದೇಬಿಹಾಳ : ಉತ್ತರಖಂಡದ ರಾಮಲೀಲಾ ಮೈದಾನದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಕಾರಣಕ್ಕಾಗಿ ಶ್ರೀರಾಮ ಸೇನೆಯವರು ಆ ಜಾಗೆವನ್ನು ತೊಳೆದು ಶುದ್ದೀಕರಣ ಮಾಡಿರುವ ಕ್ರಮ ತೀವ್ರ ಖಂಡನೀಯ ಎಂದು ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆAಚಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಆ. 8ರಂದು ಭಾಷಣ ಮಾಡುವಾಗ ಬಿಜೆಪಿಯನ್ನು ರಾಜಕೀಯವಾಗಿ ಟೀಕಿಸಿದ್ದರೇ ಹೊರತು ಹಿಂದು ಧರ್ಮದ ಬಗ್ಗೆಯಾಗಲಿ, ಆರ್.ಎಸ್.ಎಸ್. ಬಗ್ಗೆಯಾಗಲಿ ಖರ್ಗೆಯವರು ಮಾತನಾಡಿರಲಿಲ್ಲ. ಅಲ್ಲಿನ ಶ್ರೀರಾಮ ಸೇನೆಯವರು ಅ.10ರಂದು ಖರ್ಗೆಯವರು ಭಾಷಣ ಮಾಡಿದ ಸ್ಥಳವನ್ನು ಶುದ್ಧಿಕರಣ ಮಾಡಿರುವದು ದ್ವೇಷ, ಅಜ್ಞಾನ, ಅಸೂಯೆ, ಅಸಮಾನತೆ ಪ್ರತೀಕವಾಗಿದೆ. ಇದು ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಈ ಘಟನೆಯನ್ನು ಪ್ರಧಾನಿ,ಕೇಂದ್ರ ಗೃಹ ಸಚಿವರು ಖಂಡಿಸುವ ಕನಿಷ್ಠ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೇ ರಾಜ್ಯ ಬಿಜೆಪಿ ಅಧ್ಯಕ್ಷರಾಗಲಿ,ಬಿಜೆಪಿ ಸಂಸದರಾಗಲಿ, ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಖಂಡಿಸದೇ ಇರುವುದು ಸರಿಯಲ್ಲ. ಇಂಥ ಘಟನೆಗಳನ್ನು ಖಂಡಿಸದೇ ಇದ್ದರೇ ಕಿಡಿಗೇಡಿಗಳು ತಮ್ಮದೇ ಸರಿಯೆಂದು ತಿಳಿಯುತ್ತಾರೆ. ಇನ್ನು ಪ್ರಧಾನಮಂತ್ರಿಗಳು ವಿದೇಶಿ ನೆಲದಲ್ಲಿ ನಿಂತು ಬುದ್ದ, ಬಸವ, ಗಾಂಧೀಜಿ ನಾಡಿನಿಂದ ಬಂದಿದ್ದೇನೆOದು ಹೇಳಿಕೊಂಡು ದೊಡ್ಡ ಭಾಷಣ ಮಾಡುತ್ತಾರೆ. ಆದರೆ ದೇಶದಲ್ಲಿ ಇದ್ದಾಗ ಮೌನಕ್ಕೆ ಜಾರುತ್ತಾರೆ. ಇದು ಸರಿಯೇ? ಎಂದು ಪ್ರಶ್ನಿಸಿದರು.
ಕಾರ್ಮಿಕ ಮುಖಂಡ ಅಬ್ದುಲರಹೇಮಾನ ಬಿದರಕುಂದಿ ಮಾತನಾಡಿ, ಪ್ರಧಾನಿಗಳು ಸಮಾನತೆಯನ್ನು ವಿರೋಧಿಸುವವರಿಗೆ ಛಾಟಿ ಬೀಸುವ ಕೆಲಸವನ್ನು ಮಾಡಬೇಕು. ಓಟಿನ ರಾಜಕಾರಣ ಚುನಾವಣೆ ಬಂದಾಗ ಮಾಡಬೇಕು. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇಂಥ ಕೃತ್ಯವನ್ನು ಖಂಡಿಸಬೇಕು. ಜತೆಗೆ ತಪ್ಪಿತಸ್ತರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಹೇಳಿದರು. ಸಾಹಿತಿ ಶಿವಪುತ್ರ ಅಜಮನಿ,ಸಮತಾವಾದದ ಚಿಂತಕ ಎಸ್.ಎಚ್.ಮುದ್ನಾಳ ಇದ್ದರು.







