ಮುದ್ದೇಬಿಹಾಳ : ಹೆತ್ತ ತಂದೆ ತಾಯಿಗೆ, ಬೆಳೆಸಿದ ಗುರುವಿಗೆ ಹೆಸರು ತರುವುದು ಅವರ ಉಸಿರು ತಗೆಯುವುದು ವಿದ್ಯಾರ್ಥಿಗಳಾದ ನಿಮ್ಮ ಕೈಯ್ಯಲ್ಲಿದೆ.ವಿದ್ಯೆ ಶಿಖರವೇರಿ ಗರ್ವದ ಮೇಲೆ ಕೂರಬಾರದು.ಹಣದಿಂದ ಯಾವುತ್ತೂ ಶಿಕ್ಷಣವನ್ನು ಅಳೆಯಬಾರದು ಎಂದು ಕಕ್ಕೇರಾ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಬಸಯ್ಯ ಮಠ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೀದರನ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಮೂರು ಸಾವಿರ ವಿದ್ಯಾರ್ಥಿಗಳಲ್ಲಿ 1500 ಜನ ಲಾಂಗ್ಟರ್ಮ್ ಇರುವ ವಿದ್ಯಾರ್ಥಿಗಳಲ್ಲಿ 50-100 ಜನ ಸಾಧನೆ ಮಾಡಿದ್ದನ್ನೆ ನಮ್ಮ ಭಾಗದ ಜನ ಆ ಸಂಸ್ಥೆಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ.ಆದರೆ ಪ್ರತಿಭಾನ್ವಿತ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡದಿದ್ದರೆ ಮುಂದೆ ಅನುಭವಿಸುವುದು ನಾವೆ.ವಾಣಿಜ್ಯ ಕೇಂದ್ರಗಳಾಗಿರುವ ಶಾಲೆಗಳು ಬಹಳಷ್ಟು ಡೊನೇಶನ್ ಹಾವಳಿಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಗಗನ ಕುಸುಮವಾಗಿದೆ.ಆದರೆ ದುಡ್ಡು ಶಿಕ್ಷಣಕ್ಕೆ ಯಾವುತ್ತು ಸಮನವಾಗಿರುವುದಿಲ್ಲ.ನಾಗರಬೆಟ್ಟದ ಬಿ.ಜಿ.ಮಠ ಅವರು ಹೃದಯವಂತರು.ಇದು ವಿದ್ಯಾ ಸಂಸ್ಥೆ ಮಕ್ಕಳನ್ನು ಪಾಲಕರ ಸಮಾನವಾಗಿ ಕಾಣುವ ಜೊತೆಗೆ ಅರಿವು,ಸಂಸ್ಕೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಮಾತನಾಡಿ, ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರೀಕ್ಷೆಗಾಗಿ ಈ ಪರೀಕ್ಷೆಗಳನ್ನು ಆಯೋಜಿಸಿದ್ದೇವೆ.ನೀವು ಕೊಟ್ಟ ದುಡ್ಡಲ್ಲಿ ನಾವು ಸಂಸ್ಥೆಯನ್ನು ನಡೆಸಬೇಕು.ಲಾಂಗ್ಟರ್ಮ್ನಲ್ಲಿ ಪ್ರತಿ ವರ್ಷ 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದೇವೆ.ನಮ್ಮಿಂದ ಸಾಧ್ಯವಾಷ್ಟು ಮಟ್ಟಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ತಾಲ್ಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಚಿತ್ತರಗಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಗೊಂದಲಕ್ಕೆ ಒಳಗಾಗದೇ ಪ್ರಶ್ನೆಪತ್ರಿಕೆ,ಓಎಂಆರ್ ಶೀಟ್ಗಳನ್ನು ಸ್ಪಷ್ಟವಾಗಿ,ಖಚಿತವಾಗಿ ತುಂಬುವ ಕಲೆಯನ್ನು ಅರಿತುಕೊಳ್ಳಬೇಕು.ಕೆಲವು ಸಣ್ಣ ಸಣ್ಣ ತಪ್ಪುಗಳು ದೊಡ್ಡ ಸಾಧನೆಗೆ ಅಡ್ಡಗಾಲು ಆಗುತ್ತವೆ.ಇಂತಹದರ ಬಗ್ಗೆ ಪಾಲಕರು,ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನೊಳ್ಳಿ ಜಿ.ಎಚ್.ಎಸ್ ಶಾಲೆಯ ಮುಖ್ಯಗುರು ಬಸಯ್ಯ ಪುರವಂತಮಠ,ಬಸರಕೋಡ ಸಿಆರ್ಪಿ ಅಮರೀಶ ಕಸಬೇಗೌಡರ,ವೀರೇಶ ನವಲಿ,ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ವಲ್ ಮಠ, ಪ್ರಾಚಾರ್ಯ ಇರ್ಫಾನ್ ಬಾಗವಾನ,ಮಾರ್ಗದರ್ಶಕ ಎಲ್.ಎಚ್.ನದಾಫ ಹಾಗೂ ಶಿಕ್ಷಕರು ಇದ್ದರು. ಪ್ರಾಸ್ತಾವಿಕವಾಗಿ ಶಿಕ್ಷಕ ರಾಜು ಮೋಟಗಿ ಮಾತನಾಡಿದರು.ಹೀರೂ ನಾಯಕ ಸ್ವಾಗತಿಸಿದರು.ಶಿವಯ್ಯ ಮಠ ಹಾಗೂ ಮಲ್ಲಿಕಾರ್ಜುನ ಕಂಬಳಿ ನಿರೂಪಿಸಿದರು.ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಗೆ ವಿವಿಧ ಭಾಗಗಳಿಂದ ಆಗಮಿಸಿದ್ದ 1100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಫಲಿತಾಂಶ :
ಬ್ರಿಲಿಯಂಟ್ ಮೈಲೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಗಂಗಮ್ಮ ಎ.ಕೋಳೂರು ಪ್ರಥಮ,ವಿಜಯಪುರದ ಶಾಂತಿನಿಕೇತನ ಶಾಲೆಯ ಅದಿತಿ ರಾಜಮಾನ್ಯ ದ್ವಿತೀಯ,ಬಿದರಕುಂದಿ ಆರ್.ಎಂ.ಎಸ್.ಎ ಶಾಲೆಯ ಸುಪ್ರಿತ್ ಎಸ್. ಪಾಟೀಲ ತೃತೀಯ,ವಿಜಯಪುರ ಎಕ್ಸಲಂಟ್ ಶಾಲೆಯ ಅಪೂರ್ವ ಎಸ್.ಮೂಲಿಮನಿ ನಾಲ್ಕನೇ ಹಾಗೂ ಆಲಮಟ್ಟಿ ಪಿಎಮ್ ಶ್ರೀ ಜೆ.ಎನ್.ವಿ ಶಾಲೆಯ ಕಾರ್ತಿಕ ಜಲಪೂರ ಐದನೇ ಸ್ಥಾನ ಪಡೆದುಕೊಂಡರು.







