ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ ಸಮಾಜದ ಬಾಂಧವರನ್ನು ಸೇರಿಕೊಂಡು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.
ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಬಸವ ಜಯಂತಿಯ ದಿನದಂದು ಕಿಲ್ಲಾದಲ್ಲಿರುವ ಹೊಸಮಠದಲ್ಲಿ ಸಂಜೆ 4ಕ್ಕೆ ಧರ್ಮಸಭೆ ನಡೆಸಿ ಅಲ್ಲಿ ಬಸವಣ್ಣನವರ ಕುರಿತು ಉಪನ್ಯಾಸವನ್ನು ನುರಿತ ಅನುಭಾವಿಗಳಿಂದ ನಡೆಸಲಾಗುವುದು.ಧರ್ಮಸಭೆಗೆ ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಸಂಜೆ 5ಕ್ಕೆ ಕಿಲ್ಲಾದ ಹೊಸಮಠದಿಂದ ಸರಾಫ ಬಜಾರ್ ಮೂಲಕ ಎಲ್ಲ ಅಂಗಡಿಕಾರರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಿಳಿಸಲಾಯಿತು.
ಕಾರ್ಗಿಲ್ ಸ್ಮಾರಕ ಸಮೀತಿಯ ಮುಖಂಡ ಶ್ರೀಕಾಂತ ಹಿರೇಮಠ ಅವರಿಗೆ ಬಸವಣ್ಣನವರ ವೇಷಧಾರಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತಿಳಿಸಲಾಯಿತು.ಬಸವಣ್ಣನವರ ಭಾವಚಿತ್ರದೊಂದಿಗೆ ಬಸವಣ್ಣನವರ ಸಮಕಾಲೀನ ಶರಣರ ವೇಷಧಾರಿಗಳಾಗಿ ಬರುವವರಿಗೆ ಟ್ರಾö್ಯಕ್ಟರ್‌ನಲ್ಲಿ ಕರೆದುಕೊಂಡು ತೆರಳಲಾಗುತ್ತದೆ.ಆಯಾ ಸಮಾಜದವರು ತಮ್ಮ ಶರಣರ ವೇಷಧಾರಿಗಳಾಗಿ ಪಾಲ್ಗೊಳ್ಳುವಂತೆ ತಿಳಿಸಲಾಯಿತು.
ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಬಣಜಿಗ ಸಮಾಜದ ಮುಖಂಡ ಸುಧೀರ ನಾವದಗಿ, ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ, ಪತ್ರಕರ್ತ ಶಂಕರ ಹೆಬ್ಬಾಳ,ದಲಿತ ಸಮಾಜದ ಮುಖಂಡ ವಾಯ್.ಎಚ್.ವಿಜಯಕರ್,ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ಮಣಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಮಹಾoತೇಶ ಬೂದಿಹಾಳಮಠ,ಕರ್ನಾಟಕ ಅರ್ಬನ್ ಬ್ಯಾಂಕ್ ನಿರ್ದೇಶಕ ರಾಜಶೇಖರ ಕರಡ್ಡಿ ಮತ್ತಿತರರು ಮಾತನಾಡಿ ಸಲಹೆ ಸೂಚನೆ ನೀಡಿದರು.
ದಾನಿಗಳ ನೆರವಿನೊಂದಿಗೆ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಲು ಸಭೆ ಒಕ್ಕೂರಲಿನ ನಿರ್ಧಾರ ಕೈಗೊಂಡಿತು.ಕೆಲವು ದಾನಿಗಳು ಸಭೆಯಲ್ಲಿ ದೇಣಿಗೆ ನೀಡಿದರಲ್ಲದೇ ಇನ್ನೂ ಕೆಲವರು ವಾಗ್ದಾನ ಮಾಡಿದರು.ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಾಗೂ ಇತರೆ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.
ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆಗೆ ಜಾಕ್ ಅಳವಡಿಕೆಗೆ ಚಿಂತನೆ:
ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಶಂಕರ ಹೆಬ್ಬಾಳ, ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಲು ಪ್ರತಿ ವರ್ಷ ಜೆಸಿಬಿ,ಹಿಟಾಚಿ ಯಂತ್ರ ಬಳಸಲಾಗುತ್ತಿದೆ.ಇದಕ್ಕಿಂತ ಪರ್ಯಾಯ ವ್ಯವಸ್ಥೆ ಮಾಡಿ ಸಾರ್ವತ್ರಿಕವಾಗಿ ಎಲ್ಲರೂ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲು ಸಮಾಜದವರು ಮುಂದಾಗಬೇಕಿದೆ ಎಂದು ಹೇಳಿದಾಗ ಪ್ರತಿಕ್ರಿಯಿಸಿದ ಮುಖಂಡರಾದ ಪ್ರಭುರಾಜ ಕಲ್ಬುರ್ಗಿ,ಸುಧೀರ ನಾವದಗಿ, ಪುತ್ಥಳಿಗೆ ಮಾಲಾರ್ಪಣೆ ಮಾಡಲು ಪರ್ಯಾಯ ಮೆಟ್ಟಿಲು ಮಾಡಲು ಮುಂದಾದರೆ ಮೂರ್ತಿಯ ಸೌಂದರ್ಯ ಮರೆಯಾಗುತ್ತದೆ.ಅದಕ್ಕಾಗಿ ಕಾರ್ಯಯೋಜನೆಯನ್ನು ಕೈ ಬಿಡಲಾಗಿದೆ.ಯಾರಾದರೂ ನುರಿತ ತಜ್ಞರು ಇದ್ದಲ್ಲಿ ಮೂರ್ತಿಯ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಜಾಕ್ ಸಿಸ್ಟಮ್ ಮಾಡಿ ಹಾರ,ಪೂಜೆ ಸಲ್ಲಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ.ಅಂತವರು ಯಾರಾದರೂ ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವoತೆ ತಿಳಿಸಿದರು.







