ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ ಬೆಳಗಾವಿ ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಸಿ.ಎಸ್.ನಾಡಗೌಡ ನಡೆಸಿದ ಪತ್ರ ವ್ಯವಹಾರ ಹಾಗೂ ಮಾತುಕತೆಗೆ ಸ್ಪಂದನೆ ಸಿಕ್ಕಿದ್ದು ಎಎಲ್ಬಿಸಿ ಕಾಲುವೆಯಿಂದ ರೈತರ ಒಣಗುತ್ತಿರುವ ಬೆಳೆಗೆ ನೀರಿನ ಆಸರೆ ದೊರೆತಿದೆ.
ತಾಲ್ಲೂಕಿನ ಕೃಷ್ಣಾ ನದಿ ನೀರನ್ನು ನಂಬಿ ಬಿತ್ತನೆ ಮಾಡಿದ್ದ ಮೆಣಸಿಣಕಾಯಿ ಬೆಳೆಗೆ ಮೂರು ದಿನಗಳ ಕಾಲ ನೀರು ಹರಿಸುವಂತೆ ರೈತರು ವಿನಂತಿಸಿದ್ದರಿoದ ನ.22ರಂದು ಪತ್ರ ಬರೆದಿದ್ದ ನಾಡಗೌಡರು ರೈತರ ಬೆಳೆಗಳಿಗೆ ನೀರು ಹರಿಸುವಂತೆ ವಿನಂತಿಸಿದ್ದರು.ಇದೀಗ ಆಲಮಟ್ಟಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸುವ ಮೂಲಕ ಶಾಸಕರ ಮಾತಿಗೆ ಸ್ಪಂದನೆ ದೊರೆತಂತಾಗಿದೆ.
ನಾಗರಬೆಟ್ಟದ ಯೋಜನೆಯ ಪೈಪಲೈನ್ ದುರಸ್ತಿ:
ಬಹು ನಿರೀಕ್ಷಿತ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಟ್ರಯಲ್ ರನ್ ಬುಧವಾರ ಅಧಿಕಾರಿಗಳು ಯಶಸ್ವಿಯಾಗಿ ನಡೆಸಿದ್ದಾರೆ.ಕ್ಷೇತ್ರದ ಶಾಸಕರು, ನಾಗರಬೆಟ್ಟದ ಪರಮಾನಂದ ದೇವಸ್ಥಾನದ ಆವರಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪೈಪಲೈನ್ ದುರಸ್ತಿ ಮಾಡಿಸಿ ಟ್ರಯಲ್ ರನ್ ನಡೆಸಲು ನೀಡಿದಂತೆ ಸೂಚನೆಯಂತೆ ಅಧಿಕಾರಿಗಳು ಮತ್ತು ತಂತ್ರಜ್ಞರ ತಂಡ ಪ್ರಾಯೋಗಿಕವಾಗಿ ನೀರನ್ನು ಹರಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಶಾಸಕರ ಕಚೇರಿ, ಕೆಲವೇ ದಿನಗಳಲ್ಲಿ ಸಿಎಂ, ನೀರಾವರಿ ಸಚಿವರನ್ನು ಆಹ್ವಾನಿಸಿ ಅವರಿಂದ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮವನ್ನು ಶಾಸಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದೆ.







